ಬಳ್ಳಾರಿ :ಅದು 300 ಕ್ಕೂ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡೋ ಶಾಲಾ ಕಟ್ಟಡ. ಶಿಥಿಲಾವಸ್ಥೆಗೆ ಬಂದಿದ್ದರಿಂದ ಅದನ್ನ ಬಿಟ್ಟು ಪಕ್ಕದಲ್ಲೇ ಹೊಸ ಕಟ್ಟಡ ನಿರ್ಮಾಣ ಮಾಡಿದ್ದಾರೆ. ಆದರೆ ಹಳೇ ಕಟ್ಟಡವನ್ನ ಮಾತ್ರ ನೆಲಸಮ ಮಾಡದೆ ಹಾಗೆ ಬಿಟ್ಟಿದ್ದು, ಯಾವಾಗ ಬೀಳುತ್ತೋ ಗೊತ್ತಿಲ್ಲದ್ದಂತಾಗಿದೆ.
ಜಿಲ್ಲೆಯ ಜಾನೇಕುಂಟೆ ಗ್ರಾಮದ ಈ ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸರಿ ಸುಮಾರು 300ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಶಾಲೆಯ ಒಂದು ಭಾಗದಲ್ಲಿ ಹೊಸದಾಗಿ ತರಗತಿ ಕೊಠಡಿಗಳನ್ನ ನಿರ್ಮಿಸಲಾಗಿದೆಯಾದ್ರೂ, ಶಿಥಿಲಾವ್ಯಸ್ಥೆಗೆ ತಲುಪಿದ ತರಗತಿ ಕೊಠಡಿ ಕೆಡವಲು ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದಾಗುತ್ತಿಲ್ಲ ಎಂದು ಜಾನೇಕುಂಟೆ ಗ್ರಾಮಸ್ಥರು ದೂರಿದ್ದಾರೆ.
ಈ ಶಾಲೆಯ ಶಿಥಿಲಗೊಂಡ ತರಗತಿ ಕೊಠಡಿಯೊಳಗೆ ವಿದ್ಯಾರ್ಥಿಗಳು ಆಟವಾಡುತ್ತಿದ್ದಾರೆ. ಅದರಿಂದ ಕೊಠಡಿಯ ಗುಣಮಟ್ಟದ ಪ್ರಶ್ನೆಯೂ ಉದ್ಭವಿಸುತ್ತದೆ. ಹೀಗಾಗಿ, ಶಿಕ್ಷಣ ಇಲಾಖೆಯು ಶಿಥಿಲಗೊಂಡ ಸರ್ಕಾರಿ ಶಾಲೆಯಲ್ಲಿನ ಈ ತರಗತಿ ಕೊಠಡಿಯನ್ನು ಕೆಡವಲು ಅಗತ್ಯಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.