ಬಳ್ಳಾರಿ :ಹಂಪಿ ಉತ್ಸವ ಆಚರಣೆ ಮಾಡಲು ಸರ್ಕಾರ ನಾನಾ ಕಾರಣ ನೀಡುತ್ತಿದೆ. ಈ ನಿರ್ಧಾರ ಈ ಭಾಗದ ಜನರನ್ನು ಕೆರಳಿಸಿದ್ದು, ಮಾಡುವ ಆಸಕ್ತಿ ಇದ್ರೆ ಮೂರು ದಿನ ಮತ್ತು ನಿಗದಿತ ಸಮಯಕ್ಕೆ ಮಾಡಿ ಎಂಬ ಕೂಗು ಕೇಳಿ ಬಂದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಜನಸೈನ್ಯ ಸಂಘಟನೆಯ ಕಾರ್ಯಕರ್ತರು ಈ ಕುರಿತು ಹೋರಾಟ ನಡೆಸಿದರು. ಈ ವೇಳೆ ಸರ್ಕಾರ ಹಂಪಿ ಉತ್ಸವ ನಡೆಸುವ ಸಮಯದಲ್ಲಿ ಒಂದಲ್ಲ ಒಂದು ನೆಪವೊಡ್ಡಿ ನಿಗದಿತ ಸಮಯಕ್ಕೆ ಮಾಡಲಾಗುತ್ತಿಲ್ಲ. ಈ ಬಾರಿ ಪ್ರತೀತಿಯಂತೆ ನವೆಂಬರ್ 3,4,5ರಂದು ನಡೆಸಬೇಕೆಂದು ಒತ್ತಾಯಿಸಿದರು.
ಈ ವೇಳೆ ರಾಜ್ಯಾಧ್ಯಕ್ಷ ಎರ್ರಿಸ್ವಾಮಿ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ವಿಶ್ವವಿಖ್ಯಾತ ಹಂಪಿ ಉತ್ಸವ ಮಾಡಲು ಪ್ರತಿವರ್ಷ ಒಂದಲ್ಲ ಒಂದು ರೀತಿಯ ನೆಪಗಳನ್ನೊಡ್ಡಿ ನಿಗದಿತ ಸಮಯಕ್ಕೆ ಮಾಡಲಾಗದೇ, ಕೊನೆಗೆ ಅತ್ತು ಕರೆದು ಮಾಡುವ ಸ್ಥಿತಿಗೆ ತಂದಿಡಲಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ಬಳಿಕ ಹೋರಾಟಗಾರ ರಾಧಾಕೃಷ್ಣ ಮಾತನಾಡಿ, ಮೈಸೂರು ದಸರಾವನ್ನು ರಾಜ್ಯದಲ್ಲಿ ಏನೇ ಸಮಸ್ಯೆ, ಆತಂಕಗಳಿದ್ದರೂ ಚಾಚು ತಪ್ಪದೇ ಒಂಭತ್ತು ದಿನಗಳ ಕಾಲ ಮಾಡಲಾಗುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಮಳೆಯಿಂದಾಗಿ ಸಾವಿರಾರು ಕುಟುಂಬಗಳು ಬೀದಿಗೆ ಬಿದ್ದಿದ್ದರೂ, ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಮಾಡಲಾಗಿದೆ.
ಹೀಗೆ ಉತ್ಸವಗಳ ಮೇಲೆ ಉತ್ಸವ ಮಾಡೋ ರಾಜ್ಯ ಸರ್ಕಾರಕ್ಕೆ ಯಾಕೆ ಪ್ರತಿ ಬಾರಿ ಹಂಪಿ ಉತ್ಸವ ಎರಡು ದಿನ, ಅದು ನಿಗದಿತ ಸಮಯದಲ್ಲಿ ಮಾಡದೆ ಕಾಟಾಚಾರಕ್ಕೆ ಯಾಕೆ ಮಾಡಬೇಕೆಂದು ಪ್ರಶ್ನೆ ಮಾಡಿದರು.