ಬಳ್ಳಾರಿ: ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಯ ಸುದ್ದಿ ತಿಳಿದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಅಮ್ಮನ ನೆನಸಿಕೊಂಡು ಪೋಸ್ಟ್ ಮಾಡಿದ್ದಾರೆ.
ಅಮ್ಮನ ನೆನಪಿಸಿಕೊಂಡ ಗಾಲಿ ಜನಾರ್ದನ ರೆಡ್ಡಿ: ಫೇಸ್ಬುಕ್ನಲ್ಲಿ ಭಾವುಕ ಪೋಸ್ಟ್ - ಶ್ರೀರಾಮುಲು
ಸುಷ್ಮಾ ಸ್ವರಾಜ್ ನಿಧನಕ್ಕೆ ಗಾಲಿ ಜನಾರ್ಧನ ರೆಡ್ಡಿ ಫೇಸ್ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡುವ ಮೂಲಕ ತಮ್ಮ ರಾಜಕೀಯ ಗುರುವನ್ನು ನೆನಸಿಕೊಂಡಿದ್ದಾರೆ.
ಸುಷ್ಮಾ ಅಮ್ಮನ ನೆನಪಿಸಿಕೊಂಡ ಗಾಲಿ ರೆಡ್ಡಿ, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸುಷ್ಮಾಗೆ ಭಾವಪೂರ್ಣ ಅಕ್ಷರ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ರಾಜಕೀಯ ಬೆಳಕು ಹಾಗೂ ಪ್ರೀತಿಯ ಮಡಿಲಿನಲ್ಲಿ ಹಾಕಿಕೊಂಡು ನನ್ನನ್ನ ಬೆಳೆಸಿದವರು. ಜನ್ಮ ಕೊಟ್ಟವರು ಒಬ್ಬರಾದ್ರೆ, ರಾಜಕೀಯದಲ್ಲಿ ಬೆಳೆಸಿದವರು ಸುಷ್ಮಾ ಅಮ್ಮ. ನಮ್ಮದು ತಾಯಿ ಮಗನ ಸಂಬಂಧ. ಇದನ್ನು ಶಬ್ದಗಳಲ್ಲಿ ವರ್ಣಿಸಲು ಆಗೋದಿಲ್ಲ. ಬಳ್ಳಾರಿಗೆ ಆಗಮಿಸಿ ಕೇವಲ ಹದಿನೆಂಟು ದಿನದಲ್ಲಿ ಕನ್ನಡ ಭಾಷೆ ಕಲಿತರು. ಬಳ್ಳಾರಿ ವಿಶ್ವದ ಗಮನ ಸೆಳೆಯಲು ಸುಷ್ಮಾ ಅವರು ಕಾರಣ. 13 ವರ್ಷಗಳ ಕಾಲ ಕೊಟ್ಟ ಮಾತಿನಂತೆ ಸುಷ್ಮಾ ಬಳ್ಳಾರಿಗೆ ಆಗಮಿಸುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬದ ಪೂಜೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 1999ರಲ್ಲಿ ಬಳ್ಳಾರಿಯಲ್ಲಿ ಸುಷ್ಮಾ ಸೋತಾಗ ನಾನು, ರಾಮುಲು ಕಣ್ಣೀರಿಟ್ಟಿದ್ದೆವು. ತಾಯಿಯಾಗಿ ಸುಷ್ಮಾ ನಮ್ಮಿಬ್ಬರನ್ನು ಸಮಾಧಾನಪಡಿಸಿದ್ದರು. ವರಮಹಾಲಕ್ಷ್ಮಿ ವ್ರತದ ದಿನಗಳಲ್ಲಿ ತಾಯಿ ಸುಷ್ಮಾ ಅಗಲಿದ್ದಾರೆ. ಇದು ನಮಗೆ ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ ಎಂದು ಭಾವುಕತೆಯಿಂದ ಫೇಸ್‌ಬುಕ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ದೆಹಲಿಗೆ ತೆರಳಲು ರೆಡ್ಡಿ ನಿರ್ಧಾರ: ಬೆಂಗಳೂರಿನಿಂದ ದೆಹಲಿಗೆ ತೆರಳಲು ರೆಡ್ಡಿ ಪಾಳಯ ನಿರ್ಧಾರ ಮಾಡಿದೆ. ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ದೆಹಲಿಗೆ ಪಯಣ ಬೆಳೆಸಲಿದ್ದಾರೆ. ಸಹೋದರ ಸೋಮಶೇಖರ ರೆಡ್ಡಿ, ಸ್ನೇಹಿತ ಶ್ರೀರಾಮುಲು ಅವರೊಂದಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ದೆಹಲಿಗೆ ತೆರಳಿ, ಸುಷ್ಮಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲಿದ್ದಾರೆ.