ಕರ್ನಾಟಕ

karnataka

ETV Bharat / state

ಹೊಸ ಪಕ್ಷದ ಬಾವುಟ ಬಿಡುಗಡೆ ಮಾಡಿದ ಜನಾರ್ದನ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ - ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾವುಟವನ್ನು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆ ಮಾಡಿದರು.

aruna lakshmi
ಅರುಣಾ ಲಕ್ಷ್ಮಿ

By

Published : Jan 1, 2023, 12:44 PM IST

Updated : Jan 1, 2023, 1:37 PM IST

ಕೆಆರ್​ಪಿ‌ ಪಕ್ಷದ ಬಾವುಟ ಬಿಡುಗಡೆ ಮಾಡಿದ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ

ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿ ಕಳೆದ ಕೆಲ ದಿನಗಳ ಹಿಂದಷ್ಟೇ ಕಲ್ಯಾಣ ರಾಜ್ಯ ಪ್ರಗತಿ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಇದೀಗ ಹೊಸವರ್ಷದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಕೆಆರ್​ಪಿ‌ ಪಕ್ಷದ ಬಾವುಟವನ್ನು ಇಂದು‌ ಅಧಿಕೃತವಾಗಿ‌ ರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ ಬಿಡುಗಡೆಗೊಳಿಸಿದ್ದಾರೆ.

ಬೆಣಕಲ್ ಗ್ರಾಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಅರುಣಾ ಲಕ್ಷ್ಮಿ ಪಕ್ಷದ ಬಾವುಟವನ್ನು ಬಿಡುಗಡೆ ಮಾಡಿದರು. ಹಸ್ತಲಾಘವ ಹೊಂದಿರುವ ಸಹಕಾರ ಮಾದರಿಯ ಚಿಹ್ನೆಯನ್ನು ಬಾವುಟದಲ್ಲಿ ಬಳಕೆ ಮಾಡಲಾಗಿದೆ.

ಬಳಿಕ ಮಾತನಾಡಿದ ಅರುಣಾ ಲಕ್ಷ್ಮಿ, 'ಇಡೀ ರಾಜ್ಯ ಕಲ್ಯಾಣ ಕರ್ನಾಟಕ ಆಗಬೇಕೆಂಬುದು ಜನಾರ್ದನ ರೆಡ್ಡಿಯವರ ಬಯಕೆ. ತಾವು ಹುಟ್ಟಿ ಬೆಳೆದ ಬಳ್ಳಾರಿ ಪ್ರಚಂಚದ ಭೂಪಟದಲ್ಲಿ ಕಾಣಬೇಕು. ಅವರ ಆಶಯದಂತೆ ಕೆಲಸ ಮಾಡುವುದು ನನ್ನ ಜವಾಬ್ದಾರಿ. ರೆಡ್ಡಿಯವರಿಗೆ ಕೋರ್ಟ್ ನಿರ್ಬಂಧ ಇರುವುದರಿಂದ ನಾನು ಬೆಣಕಲ್ ಗ್ರಾಮಕ್ಕೆ ಬಂದಿದ್ದೇನೆ. ಕುರುಬ ಸಮಾಜದ ಜನರ ಆಶೀರ್ವಾದ ನಮ್ಮ ಮೇಲಿದ್ದರೆ ಚುನಾವಣೆ ಗೆದ್ದೇ ಗೆಲ್ಲುತ್ತೇವೆ ಎಂಬುದು ನನ್ನ ಪತಿಯ ನಂಬಿಕೆ. ಹಾಗಾಗಿ,‌ ಬಾವುಟ ಬಿಡುಗಡೆ ಕಾರ್ಯಕ್ರಮವನ್ನು ಕುರುಬ ಸಮಾಜದವರೊಂದಿಗೆ ಸೇರಿ ಚಾಲನೆ ನೀಡಲಾಯಿತು' ಎಂದರು.

ಇದನ್ನೂ ಓದಿ:ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಬಿಜೆಪಿಗೆ ಬಿಸಿ ತಟ್ಟಲಿದೆಯಾ..?

ಈ ಸಂದರ್ಭದಲ್ಲಿ ಬಸವಣ್ಣ, ವಾಲ್ಮೀಕಿ, ಕನಕದಾಸರನ್ನು ನೆನೆದ ಅರುಣಾ ಲಕ್ಷ್ಮಿ, ಬಸವಣ್ಣನವರ ಕುಲ ಕುಲವೆಂಬ ವಚನ ವಾಚಿಸಿದರು. ಕುಲ, ಮತ, ಜಾತಿ ಬೇಧವಿಲ್ಲದೆ ಪಕ್ಷ ಕಟ್ಟೋಣ. ಅನೇಕ ರೀತಿಯ ನೋವು, ಅವಮಾನವನ್ನು ರೆಡ್ಡಿಯವರು ಸಹಿಸಿಕೊಂಡಿದ್ದಾರೆ. ಜನಸೇವೆ ಮಾಡಬೇಕೆಂದು ಪಕ್ಷ ಕಟ್ಟಿದ್ದಾರೆ. ರೆಡ್ಡಿಯನ್ನು ಜ‌ನರಿಂದ ದೂರ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ತಂದೆ-ತಾಯಿ, ಬಂಧು ಬಳಗ ಎಲ್ಲವೂ ನೀವೇ. ನಿಮ್ಮನ್ನು ಬಿಟ್ಟು ನಮಗೆ ಯಾರೂ ಇಲ್ಲ ಎಂದರು. ಈ ಸಂದರ್ಭದಲ್ಲಿ ದಮ್ಮೂರು ಶೇಖರ್, ಚಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ರೆಡ್ಡಿ ಹೊಸ ಪಕ್ಷ ಸ್ಥಾಪನೆ.. ಗಂಗಾವತಿಯ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರದು: ಶಾಸಕ ಪರಣ್ಣ ಮುನವಳ್ಳಿ

ಪಕ್ಷದ ಬಾವುಟ ಬಿಡುಗಡೆಗೂ ಮುನ್ನಾ ಅವರು ತಮ್ಮ ನಿವಾಸದಲ್ಲಿ ಗೋ ಪೂಜೆ ನೆರವೇರಿಸಿದರು. ಈ ವೇಳೆ ಅರುಣಾ ಲಕ್ಷ್ಮಿಗೆ ಹೂಗುಚ್ಛ ನೀಡಿ ಮುಸ್ಲಿಂ ಯುವತಿಯರು ಶುಭಾಶಯ ಕೋರಿದರು. ಗೋ ಪೂಜೆ ಬಳಿಕ ಬೆಣಕಲ್ ಗ್ರಾಮಕ್ಕೆ ತೆರಳಿದ ರೆಡ್ಡಿ ಪತ್ನಿ, ಬೆಣಕಲ್ ಗ್ರಾಮದಲ್ಲಿ ನಡೆದ ಉಡಿ ತುಂಬುವ ಕಾರ್ಯಕ್ರಮದಲ್ಲಿ ಭಾಗಿಯಾದರು. ಅಷ್ಟೇ ಅಲ್ಲದೇ, ಇಂದಿನಿಂದ ಅಧಿಕೃತವಾಗಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಗಂಗಾವತಿಯಿಂದ ರೆಡ್ಡಿ ಸ್ಪರ್ಧೆ:ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ 12 ವರ್ಷ ವನವಾಸ ಅನುಭವಿಸಿದ್ದ ಜನಾರ್ದನ ರೆಡ್ಡಿ ಮುಂಬರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ತಿಳಿಸಿದ್ದಾರೆ. ಇಲ್ಲಿಯ ಮತದಾರರ ಪಟ್ಟಿಯಲ್ಲಿ ಅವರು ತಮ್ಮ ಹೆಸರನ್ನೂ ಸೇರಿಸಿದ್ದಾರೆ.

ಇದನ್ನೂ ಓದಿ:ರಾಜಕಾರಣಕ್ಕೆ ಗಣಿಧಣಿ ರೀ ಎಂಟ್ರಿ: ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಜನಾರ್ದನ ರೆಡ್ಡಿ ಘೋಷಣೆ

ಹೊಸ ಪಕ್ಷ ಘೋಷಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ: ಡಿಸೆಂಬರ್​ 25 ರ ಭಾನುವಾರದಂದು ಸುದ್ದಿಗೋಷ್ಠಿ ನಡೆಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ರಾಜಕೀಯ ಪಕ್ಷದ ಹೆಸರನ್ನು ಘೋಷಿಸಿದ್ದರು. 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ದ ಮೂಲಕ ಮುಂದೆ ಬರುವ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದರು. ಇದೇ ವೇಳೆ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದ ರೆಡ್ಡಿ, ಯಡಿಯೂರಪ್ಪ ನಾವು ಒಟ್ಟಿಗೆ ಪ್ರಯಾಣ ಬೆಳೆಸಿದ್ದೆವು, ಎಂದೂ ಬೇರೆಯಾಗಿಲ್ಲ. ಅವರಿಗೆ ನಾನು ತಂದೆ ಸ್ಥಾನದ ಗೌರವ ಕೊಟ್ಟಿದ್ದೇನೆ. ಹಾಗೆಯೇ ಶ್ರೀರಾಮುಲು ಮತ್ತು ಸಹೋದರರಿಗೆ ಬಿಜೆಪಿ ತೊರೆದು ನನ್ನ ಜೊತೆ ಬರುವಂತೆ ಒತ್ತಡ ಹಾಕಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದರು.

Last Updated : Jan 1, 2023, 1:37 PM IST

ABOUT THE AUTHOR

...view details