ಬಳ್ಳಾರಿ: ಕಳೆದ 12 ವರ್ಷಗಳಿಂದ ನನ್ನ ಕೇಸ್ ಸುಪ್ರೀಂಕೋರ್ಟ್ ನಲ್ಲಿದೆ. ಆದರೆ ತ್ವರಿತಗತಿಯಲ್ಲಿ ನನ್ನ ಕೇಸ್ ನಡೆಯುತ್ತಿಲ್ಲ. ಸಿಬಿಐ ಅಧಿಕಾರಿಗಳು ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾರೆ.
ನವರಾತ್ರಿಯ ಹಿನ್ನೆಲೆ ನಗರದ ಆದಿ ದೇವತೆ ಶ್ರೀಕನಕದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ನನ್ನ ಮೇಲೆ ಕೇಸ್ ಆಗಿ ಹನ್ನೆರಡು ವರ್ಷ ಆಯ್ತು. ಕಳೆದ ಹನ್ನೆರಡು ವರ್ಷಗಳಿಂದ ಕೇಸ್ ನಡೆಯುತ್ತಿಲ್ಲ. ನಾನು ಬಳ್ಳಾರಿಯಲ್ಲಿ ಇರುವುದಕ್ಕೆ ಅಧಿಕಾರಿಗಳು ಪದೇ ಪದೆ ಕೋರ್ಟ್ ನಲ್ಲಿ ಪ್ರಸ್ತಾಪ ಮಾಡುತ್ತಿದ್ದಾರೆ. ಹೀಗಾಗಿ ನಾನು ಪ್ರತಿ ದಿನ ವಿಚಾರಣೆ ನಡೆಸುವಂತೆ ಕೋರ್ಟ್ ಗೆ ಕೇಳಿದ್ದೇನೆ. ಶೀಘ್ರದಲ್ಲೇ ಕೇಸ್ ಇತ್ಯರ್ಥ ಮಾಡಲು ಕೇಳಿದ್ದೇನೆ ಎಂದು ಹೇಳಿದರು.
ಆದಿ ದೇವತೆ ಶ್ರೀಕನಕದುರ್ಗಮ್ಮ ದೇವಿಗೆ ಪೂಜೆ: ಸುಪ್ರೀಂಕೋರ್ಟ್ ನಲ್ಲಿ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ, ದುರ್ಗಮ್ಮ ತಾಯಿಗೆ ಅನ್ನ ಸಂತರ್ಪಣೆ, ವಿಶೇಷ ಅಲಂಕಾರ ಮಾಡಿಸುವುದಾಗಿ ಬೇಡಿಕೊಂಡಿದ್ದೆ. ಹೀಗಾಗಿ ಇವತ್ತು ನಾನು ದೇವಸ್ಥಾನಕ್ಕೆ ಬಂದು ಇಡೀ ದೇಶಕ್ಕೆ ಒಳ್ಳೆದಾಗಲಿ ಎಂದು ದೇವಿಗೆ ಪೂಜೆ ಸಲ್ಲಿಸಿದ್ದೇನೆ ಎಂದರು.
ಸಿಬಿಐನಿಂದ ನನಗೆ ಕಿರುಕುಳ: ಕಳೆದ ಹದಿನಾಲ್ಕು ತಿಂಗಳುಗಳಿಂದ ನಾನು ಕೇವಲ ಮನೆ ಹಾಗೂ ದೇವಸ್ಥಾನಗಳಿಗೆ ಓಡಾಡುತ್ತಿದ್ದೇನೆ. ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಆದರೂ ಸಿಬಿಐನಿಂದ ನನಗೆ ಕಿರುಕುಳ ಆಗುತ್ತಿದೆ ಎಂದರು.