ಹೊಸಪೇಟೆ:ನಗರವು ಹಲವು ಐತಿಹಾಸಿಕ ದೇವಾಲಯಗಳನ್ನು ಒಳಗೊಂಡಿದ್ದು, ಇಲ್ಲಿರುವಂತಹ ಶ್ರೀಜಂಬುನಾಥ ದೇವಾಲಯವು ಹೆಚ್ಚಿನ ಪ್ರಸಿದ್ಧಿಯನ್ನು ಹೊಂದಿದೆ. ಇಲ್ಲಿ ಏನೇ ಬೇಡಿಕೊಂಡರೂ ಅದನ್ನು ಈಡೇರಿಸುತ್ತಾನೆಂಬ ನಂಬಿಕೆಯನ್ನು ಜನ ಹೊಂದಿದ್ದಾರೆ.
ನಗರದಿಂದ ಸುಮಾರು 2 ಕೀ.ಮೀ ದೂರ ಕ್ರಮಿಸಿದರೆ ಜಂಬುನಾಥ ಎಂಬ ಹಳ್ಳಿಯಲ್ಲಿರುವ ಜಂಬುನಾಥ ಪುರಾತನ ದೇವಾಲಯ ಸಿಗುತ್ತದೆ. ಬೆಟ್ಟದ ಮೇಲಿರುವ ಈ ಜಂಬುನಾಥ ಪುಣ್ಯಕ್ಷೇತ್ರಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದೆ. ಈ ದೇವಾಲಯವು ವಿಜಯನಗರ ಸಾಮ್ರಾಜ್ಯದ ಹಂಪಿಯ ದಕ್ಷಿಣ ದ್ವಾರವಾಗಿದೆ.
ದೇವಾಲಯದ ಹಿನ್ನಲೆ:
ಜಂಬುನಾಥ ದೇವಸ್ಥಾನದಲ್ಲಿರುವ ಜಂಬುವಂತನು ಜಿತೇಂದ್ರನಾಗಿದ್ದು, ಹತ್ತು ಸಾವಿರ ವರ್ಷಗಳ ಕಾಲ ಈತ ತಪಸ್ಸು ಮಾಡಿ ಶಿವ ಮೆಚ್ಚಿಗೆಗೆ ಪಾತ್ರನಾಗಿ ಶಿವನಿಂದ ಶಕ್ತಿಯನ್ನು ಪಡೆದಿದ್ದನಂತೆ. ಇನ್ನು ಹಂಪಿಯ ವಿರೂಪಾಕ್ಷನು ಜಂಬುವಂತನ ಸಹಾಯವನ್ನು ಕೇಳಿದ ಎಂದು ಪುರಾಣ ಹೇಳಲಾಗುತ್ತಿದೆ.
ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗುವುದಕ್ಕಿಂತ ಮುಂಚೆ ಲೋಹಾದ್ರಿಯ ಸಾಲಿನಲ್ಲಿ ಈ ದೇವಸ್ಥಾನ ನಿರ್ಮಿಸಲಾಗಿದೆ. ಇಲ್ಲಿ ಶಿವಲಿಂಗವು ತನ್ನಿಂದ ತಾನಾಗಿಯೇ ಉದ್ಭವ ಲಿಂಗವಾಗಿದೆ ಎಂಬ ಪ್ರತೀತಿ ಇದೆ. ಬೈರ, ತ್ರಿಶಂಕು, ಪರಾಹ ಎಂಬ ರಾಜರಿಂದ ಈ ದೇವಾಲಯವು ನಿರ್ಮಾಣವಾಗಿದೆ.
ಶಿವನ ದೇವಾಲಯಗಳಲ್ಲಿ ಸಾಮಾನ್ಯವಾಗಿ ಲಿಂಗದ ಮುಂದೆ ಒಂದು ನಂದಿ ವಿಗ್ರಹ ಇರುತ್ತದೆ. ಆದರೆ, ಇಲ್ಲಿ ಲಿಂಗದ ಮುಂದೆ ಮೂರು ನಂದಿ ವಿಗ್ರಹಗಳಿರುವುದು ವೈಶಿಷ್ಟ್ಯತೆಯಾಗಿದೆ. ಈ ದೇವಾಲಯದಲ್ಲಿ ಕಾಂಚನ ಗಂಗಾ ಬಾವಿ ಇದೆ. ಈ ಬಾವಿಯಲ್ಲಿರುವ ನೀರನ್ನು ಕುಡಿದರೆ ಅಥವಾ ಮೈ ಮೇಲೆ ಹಾಕಿಕೊಂಡರೆ ಎಲ್ಲ ಭಕ್ತರ ಕಾಯಿಲೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದಾರೆ. ಸೋಮವಾರ ಮತ್ತು ಮಂಗಳವಾರದಂದು ವಿಶೇಷ ಪೂಜೆಗಳು ನಡೆಯುತ್ತವೆ. ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಎಂದು ದೇವಾಲಯದ ಅರ್ಚಕರು ಅಭಿಪ್ರಾಯ ವ್ಯಕ್ತಪಡಿಸಿದ್ರು.