ಹೊಸಪೇಟೆ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಅಲ್ಲದೇ, ಕುಟುಂಬದವರ ಅನುಮತಿ ಇಲ್ಲದೆಯೇ ರಾತ್ರೋ ರಾತ್ರಿ ಪೊಲೀಸರು ಮೃತದೇಹವನ್ನು ಸುಟ್ಟಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಶಾಸಕ ಹಾಗೂ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬೇಸರ ವ್ಯಕ್ತಪಡಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರ ಭೇಟಿ ಪಡಾವೋ, ಭೇಟಿ ಬಚಾವೋ ಯೋಜನೆ ಸ್ಲೋಗನ್ ಗೆ ಸಿಮೀತವಾಗಿದೆ. ಬಿಜೆಪಿಯಿಂದ ಮಹಿಳೆಯರನ್ನು ರಕ್ಷಣೆ ಮಾಡುವಂತಹ ಪರಿಸ್ಥಿತಿ ಬಂದಿದೆ. ಮಹಿಳೆ ದೂರು ನೀಡಿದರೂ ಸಹ ಒಂದು ವಾರದ ಬಳಿಕ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.