ಹೊಸಪೇಟೆ/ಬೆಂಗಳೂರು: ಪ್ರವಾಸೋದ್ಯಮ ಮತ್ತು ಪರಿಸರ ಖಾತೆ ನೀಡಿದ್ದಕ್ಕೆ ಅಸಮಾಧಾನಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ಆನಂದ್ ಸಿಂಗ್ ಮನವೊಲಿಕೆ ಮಾಡುವಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಆನಂದ್ ಸಿಂಗ್ ಅಸಮಾಧಾನ ಶಮನಗೊಂಡಂತಿಲ್ಲ. ಪ್ರಭಾವಿ ಖಾತೆಗೆ ಲಾಬಿ ನಡೆಸಲು ಅವರು ನವದೆಹಲಿಗೆ ತೆರಳಿದ್ದು, ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಮಾಜಿ ಸಿಎಂ ಯಡಿಯೂರಪ್ಪ ಸಂಧಾನದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಬದಲಿಸಿ ಆಗಸ್ಟ್ 15ರಂದು ವಿಜಯನಗರದಲ್ಲಿ ಧ್ವಜಾರೋಹಣ ನೆರವೇರಿಸಿದ್ದ ಸಚಿವ ಆನಂದ್ ಸಿಂಗ್ ಇನ್ನೂ ತಮ್ಮ ಪಟ್ಟು ಸಡಿಲಿಸಿಲ್ಲ. ವಿಧಾನಸೌಧಕ್ಕೆ ಆಗಮಿಸಿ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪೂರಕವಾಗಿ ಸಚಿವರಿಗೆ ಹಂಚಿಕೆಯಾಗಿದ್ದ ಕೊಠಡಿಗೆ ಖಾತೆಯ ನಾಮಫಲಕವನ್ನೂ ಹಾಕಲಾಗಿತ್ತು. ಆದರೆ ಆನಂದ್ ಸಿಂಗ್ ವಿಧಾನಸೌಧಕ್ಕೆ ಬರುವ ಬದಲು ದೆಹಲಿಗೆ ತೆರಳಿದ್ದಾರೆ.
ನಿನ್ನೆ ಹೊಸಪೇಟೆಯಿಂದ ಯಲ್ಲಾಪುರಕ್ಕೆ ಹೋಗಿದ್ದ ಆನಂದ್ ಸಿಂಗ್, ಅಲ್ಲಿ ರಥ ನಿರ್ಮಾಣ ಕಾಮಗಾರಿ ವೀಕ್ಷಿಸಿದ್ದರು. ಬಳಿಕ ಹೊಸಪೇಟೆ ತೆರಳುವುದಾಗಿ ಹೇಳಿದ್ದ ಅವರು, ಬೆಂಗಳೂರಿಗೂ ಬಾರದೆ ಗೋವಾಗೆ ತೆರಳಿದ್ದರು. ಅಲ್ಲಿಂದ ನವದೆಹಲಿಗೆ ಕಳೆದ ರಾತ್ರಿಯೇ ಪ್ರಯಾಣ ಬೆಳೆಸಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ, ಇಂಧನ, ಲೋಕೋಪಯೋಗಿಯಂತಹ ಟಾಪ್ ಖಾತೆಗಳಲ್ಲಿ ಒಂದನ್ನು ನೀಡುವಂತೆ ಸಿಎಂಗೆ ನಿರ್ದೇಶನ ನೀಡಿ ಎಂದು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.