ವಿಜಯನಗರ:ಆಜಾದಿ ಕಾ ಅಮೃತ್ ಮಹೋತ್ಸವ ನಿಮಿತ್ತ ಮಾನವತೆಗಾಗಿ ಯೋಗ ಎಂಬ ಧ್ಯೇಯ ವಾಕ್ಯದಡಿ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯ ಬಸವಣ್ಣ ಮಂಟಪದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಜೂ.21ರಂದು ಬೆಳಗ್ಗೆ 5:30ರಿಂದ 7:45ರವರೆಗೆ 08ನೇ ಯೋಗ ದಿನಾಚರಣೆ ಕಾರ್ಯಕ್ರಮ ನಿಗದಿಯಾಗಿದ್ದು, ಈಗಾಗಲೇ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಭಾರತದಾದ್ಯಂತ ಇರುವ 75 ಐತಿಹಾಸಿಕ/ಪಾರಂಪಾರಿಕ ಸ್ಥಳಗಳನ್ನು ಕೇಂದ್ರ ಆಯುಷ್ ಮಂತ್ರಾಲಯ ಗುರುತಿಸಿದ್ದು, ಇವುಗಳಲ್ಲಿ ಹಂಪಿ ಕೂಡ ಒಂದಾಗಿದೆ. ಇಲ್ಲಿ ನಡೆಯುವ 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಚಿವರಾದ ಪ್ರಹ್ಲಾದ್ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಸಾಹೇಬ ಜೊಲ್ಲೆ, ಸಚಿವ ಆನಂದ್ ಸಿಂಗ್, ಕನ್ನಡದ ನಟ ಅಜಯರಾವ್, ಪದ್ಮಶ್ರೀ ಮಂಜಮ್ಮ ಜೋಗತಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಹಂಪಿ ಯೋಗ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದ್ದು, ನಾಳೆ ಬೆಳಗ್ಗೆ 6 ಗಂಟೆಗೆ ಕಾರ್ಯಕ್ರಮಗಳು ಆರಂಭವಾಗಲಿದೆ. 6:40ರವರೆಗೆ ಯೋಗ ಸಂಬಂಧಿತ ವೇದಿಕೆ ಕಾರ್ಯಕ್ರಮಗಳು ನಡೆಯಲಿದ್ದು, ಬೆಳಗ್ಗೆ 6:40ರಿಂದ 7 ರವರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿನ ಅರಮನೆ ಎದುರುಗಡೆಯಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಲಿರುವ ಕಾರ್ಯಕ್ರಮದ ನೇರಪ್ರಸಾರ ನಡೆಯಲಿದೆ.