ಬಳ್ಳಾರಿ:ಶಾಲೆಯ ಛಾವಣಿ ಕುಸಿದು ತಲೆಗೆ ಗಾಯವಾಗಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದ ಹಾಜರಾಬಿ(14) ಮೃತ ವಿದ್ಯಾರ್ಥಿನಿ. ಮೆಹಬೂಬಸುಬಾನ್ ಎಂಬುವವರ ಪುತ್ರಿಯಾಗಿದ್ದ ಈಕೆ ಶಂಕರಬಂಡೆಯ ಮಾದರಿ ಸಮೂಹ ಸಂಪನ್ಮೂಲ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು.
8ನೇ ತರಗತಿ ನಡೆಸಲಾಗುತ್ತಿದ್ದ ಕೊಠಡಿಯ ಮೇಲ್ಛಾವಣಿ ಶಿಥಿಲಗೊಂಡಿತ್ತು. ಕೆಲವು ತಿಂಗಳ ಹಿಂದೆ ತರಗತಿ ನಡೆಯುವ ವೇಳೆ ಹಾಜರಾಬೀ ತಲೆಯ ಮೇಲೆ ಛಾವಣಿ ಮುರಿದು ಬಿದ್ದಿತ್ತು. ಈ ವೇಳೆ ಆಕೆಗೆ ಗಾಯವಾಗಿತ್ತು. ಈ ಘಟನೆ ಎರಡು ತಿಂಗಳ ನಂತರ ಬಾಲಕಿಯ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಶನಿವಾರ ಅಸಹಜವಾಗಿ ವರ್ತಿಸಿ ಮೃತಳಾಗಿದ್ದಾಳೆ ಎಂದು ಆಕೆಯ ಸಹಪಾಠಿಗಳು ತಿಳಿಸಿದ್ದಾರೆ.
ಶಾಲಾ ಕೊಠಡಿಗಳು ಶಿಥಿಲಾವಸ್ಥೆಯನ್ನು ತಲುಪಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದರು. ಇದಾದ ನಂತರ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆದರೆ, ಗಾಯಗೊಂಡಿದ್ದ ಹಾಜರಾಬೀ ಹೊರನೋಟಕ್ಕೆ ಆರೋಗ್ಯವಾಗಿ ಇದ್ದಳು. ಆದರೆ, ಶನಿವಾರ ಏಕಾಏಕಿ ಆರೋಗ್ಯದಲ್ಲಿ ವೈಪರೀತ್ಯ ಕಾಣಿಸಿ ಮೃತಳಾಗಿದ್ದಾಳೆ ಎನ್ನಲಾಗಿದೆ.
ಸಹಪಾಠಿಗಳ ಜತೆ ಅಸಹಜ ವರ್ತನೆ:ಶನಿವಾರ ತರಗತಿಗೆ ತೆರಳಿದ ವಿದ್ಯಾರ್ಥಿನಿ ತನ್ನ ಸಹಪಾಠಿಗಳ ಜೊತೆ ಅಸಹಜವಾಗಿ ವರ್ತಿಸಿದ್ದಾಳೆ. ಗಟ್ಟಿಯಾಗಿ ನಕ್ಕಿದ್ದಾಳೆ. ಬಳಿಕ ತಲೆಗೆ ಚಕ್ರ ಬಂದಂತಗಾಗುತ್ತಿದೆ ಅಂತಾ ಹೇಳಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಒಂದು ಕಾಲು ಮತ್ತು ಒಂದು ಕೈ ಎತ್ತಲು ಆಗುತ್ತಿಲ್ಲ ಎಂದು ತಿಳಿಸಿದ್ದಾಳೆ. ಕಣ್ಣು ತುರಿಕೆ ಬರುತ್ತಿದೆ ಎಂದು ಮುಖಕ್ಕೆ ಬಡಿದುಕೊಂಡು ಮೂರ್ಛೆ ಹೋಗಿದ್ದಾಳೆ. ಇದಾದ ನಂತರ ಶಾಲೆಯ ಶಿಕ್ಷಕಿಯೊಬ್ಬರು ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಯನ್ನು ಪರೀಕ್ಷಿಸಿದ ವೈದ್ಯರು, ಈ ಹಿಂದೆ ಆಗಿದ್ದ ಗಾಯದಿಂದ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸಿದ್ದಾರೆ.
ಘಟನೆಯ ಸುದ್ದಿ ತಿಳಿದು ಗ್ರಾಮೀಣ ಶಾಸಕ ನಾಗೇಂದ್ರ ಅವರು ದೂರವಾಣಿ ಮೂಲಕ ಬಾಲಕಿಯ ಪೋಷಕರನ್ನು ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. ತಮ್ಮ ಆಪ್ತ ಗೋವರ್ಧನ ರೆಡ್ಡಿ ಅವರ ಮೂಲಕ ತಕ್ಷಣಕ್ಕೆ 10 ಸಾವಿರ ರೂ. ವೈಯಕ್ತಿಕ ಪರಿಹಾರ ತಲುಪಿಸಿದ್ದಾರೆ. ಮುಂದಿನ ಅಗತ್ಯ ಕ್ರಮಗಳನ್ನು ಕೈಗೊಂಡು ಸರ್ಕಾರದಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಮಾದರಿ ಸಮೂಹ ಸಂಪನ್ಮೂಲ ಶಾಲೆಯ ವಿದ್ಯಾರ್ಥಿನಿ ಹಾಜರಾಬಿ ಸಾವಿಗೆ ಗ್ರಾಮಸ್ಥರು, ಗ್ರಾಮದ ಹಿರಿಯರು ಸಂತಾಪ ಸೂಚಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಮನೆಗೆ ತೆರಳಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಹೆಚ್.ನೀಲಮ್ಮ ಟಿ.ನಾಗರಾಜ, ಉಪಾಧ್ಯಕ್ಷ ಬಿ.ಸಣ್ಣಬಸಪ್ಪ ಸದಸ್ಯರಾದ ಸವಿತಾ ಕರಂಗಿ, ವೆಂಕಟೇಶ ಕೆ, ಪಿಡಿಓ, ಗ್ರಾಮ ಲೆಕ್ಕಾಧಿಕಾರಿ ಶ್ರೀನಿವಾಸ, ಶಾಲೆಯ ಮುಖ್ಯ ಗುರುಗಳು ಶಿಕ್ಷಕರು ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಶಾಲಾ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಗೆ ಗಂಭೀರ ಗಾಯ