ವಿಜಯನಗರ:ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 31ನೇ ನುಡಿಹಬ್ಬ ಘಟಿಕೋತ್ಸವದಲ್ಲಿ 'ನಾಡೋಜ' ಗೌರವ ಪದವಿ ಪ್ರದಾನ ಮಾಡಿ ಅಧ್ಯಕ್ಷೀಯ ಭಾಷಣ ಮಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾರತದ ಜ್ಞಾನಪರಂಪರೆಯನ್ನು ಮರುಸ್ಥಾಪಿಸಿ, ಜ್ಞಾನದ ಗತವೈಭವ ಮರುಸ್ಥಾಪಿಸಬೇಕಿದೆ. ಇದಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ಧ್ಯೇಯವಾಕ್ಯದೊಂದಿಗೆ ನಾವು ಮುನ್ನಡೆಯಬೇಕು ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯ ಜ್ಞಾನವನ್ನು ಬೋಧಿಸುವ ವಿಶ್ವವಿದ್ಯಾಲಯವಾಗದೇ ಜ್ಞಾನ ಸೃಜಿಸುವ ವಿವಿ ಆಗಿರುವುದು ಹೆಮ್ಮೆಯ ಸಂಗತಿ. ವಿವಿಯ ಮೊದಲ ಕುಲಪತಿ ಡಾ.ಚಂದ್ರಶೇಖರ ಕಂಬಾರ ಆಶಯದಂತೆ ವಿವಿ ಮುನ್ನಡೆಯತ್ತಿರುವುದು ಅತ್ಯಂತ ಹರ್ಷದಾಯಕ ಎಂದರು.
ಕನ್ನಡ ವಿವಿಯಿಂದ ಪಿಎಚ್‌ಡಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆದ ಸಂಶೋಧನಾ ವಿದ್ಯಾರ್ಥಿಗಳು ತಮ್ಮನ್ನು ಓದಿಸಿದ ತಂದೆ-ತಾಯಿಗಳನ್ನು ಮರೆಯದೇ ಗೌರವ ನೀಡಬೇಕು. ಭಾರತವನ್ನು ಶ್ರೇಷ್ಠ ಹಾಗು ಶಕ್ತಿಶಾಲಿ ಮತ್ತು ಜ್ಞಾನದ ಗುರುವನ್ನಾಗಿ ಮಾಡಲು ಮುಂದಿನ ಪೀಳಿಗೆಗೆ ಜ್ಞಾನ ಪಸರಿಸಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಸಂಸ್ಕೃತ ವಿವಿಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಘಟಿಕೋತ್ಸವ ಭಾಷಣ ಮಾಡಿದರು. ಕನ್ನಡ ವಿವಿ ಕುಲಪತಿ ಡಾ.ಸ.ಚಿ.ರಮೇಶ, ಕುಲಸಚಿವ ಡಾ. ಸುಬ್ಬಣ್ಣ ರೈ ಸೇರಿದಂತೆ ಸಿಂಡಿಕೇಟ್ ಸದಸ್ಯರು ಕಾರ್ಯಕ್ರಮಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಶ್ರೀಕೃಷ್ಣದೇವರಾಯ ವಿವಿ ಘಟಿಕೋತ್ಸವ: ಮೂವರಿಗೆ ಗೌರವ ಡಾಕ್ಟರೇಟ್ ಘೋಷಣೆ