ಕರ್ನಾಟಕ

karnataka

ಗಣಿನಾಡಿನಲ್ಲಿ ಪ್ರತ್ಯೇಕ ವೆಲ್ಲೆಸ್ಲಿ ಜೈಲು ನಿರ್ಮಾಣವಾಗಿದ್ದೇಕೆ?... ಇಲ್ಲಿದೆ ಅದರ ಇತಿಹಾಸ!

By

Published : Aug 15, 2019, 5:46 AM IST

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಗಣಿನಾಡಿನ ಕೊಡುಗೆ ಅಪಾರವಾಗಿದೆ. ಪ್ರತ್ಯೇಕ 'ವೆಲ್ಲೆಸ್ಲಿ' ಜೈಲು ಬಳ್ಳಾರಿಯಲ್ಲಿ ನಿರ್ಮಾಣವಾಗಿತ್ತು. ಇದರ ಬಗ್ಗೆ ಇತಿಹಾಸ ಹೇಳೋದು ಹೀಗೆ...

ಗಣಿನಾಡಿನಲ್ಲಿ ಪ್ರತ್ಯೇಕ

ಬಳ್ಳಾರಿ:ಅದು 1874ನೇಯ ಇಸವಿ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿದ್ದ ಈ ದೇಶದ ಅಗ್ರಗಣ್ಯ ಹೋರಾಟಗಾರರನ್ನೇ ಹಿಡಿದಿಟ್ಟುಕೊಳ್ಳುವುದೇ ಬ್ರಿಟಿಷರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಆಗ ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರಿಗೆ ಗಣಿನಾಡಿನ ಆ ಮೂರು ಜೈಲುಗಳೇ ಪ್ರಮುಖ ಆಸರೆಯಾಗಿದ್ದವು.

ಸ್ವಾತಂತ್ರ್ಯ ಸಂಗ್ರಾಮದ ಹೋರಾಟದ ಸಂದರ್ಭ ಕ್ಷಯರೋಗ ಕಾಯಿಲೆಯ ಭೀತಿ ಎದುರಾಗಿತ್ತು. ಅದನ್ನು ನಿಯಂತ್ರಿಸುವ ಸಲುವಾಗಿಯೇ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಪ್ರದೇಶ ವ್ಯಾಪ್ತಿ ಯಲ್ಲಿ ಪ್ರತ್ಯೇಕ 'ವೆಲ್ಲೆಸ್ಲಿ' ಜೈಲನ್ನು ಅಂದಿನ ಬ್ರಿಟಿಷ್ ಸರ್ಕಾರವು ಪ್ರಾರಂಭಿಸಿತ್ತು. ಕ್ಷಯರೋಗಕ್ಕೆ ತುತ್ತಾಗಿರುವ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ, ಅಗತ್ಯ ಚಿಕಿತ್ಸೆಯನ್ನು ಕೊಡಿಸಿರುವ ನೆನಪು ಇಂದಿಗೂ ಜೀವಂತವಾಗಿದೆ.

ಗಣಿನಾಡಿನಲ್ಲಿ ಪ್ರತ್ಯೇಕ
ಗಣಿನಾಡಿನಲ್ಲಿ ಪ್ರತ್ಯೇಕ ವೆಲ್ಲೆಸ್ಲಿ ಜೈಲು ನಿರ್ಮಾಣವಾಗಿದ್ದೇಕೆ

ಅಂದಿನ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಗಣಿ ಜಿಲ್ಲೆ ಬಳ್ಳಾರಿಗರ ಪಾತ್ರವು ಬಹುಮುಖ್ಯವಾಗಿದೆ. 1874ರಲ್ಲಿ ಮೊದಲಿಗೆ ಸೆಂಟ್ರಲ್ ಜೈಲನ್ನು ಪ್ರಾರಂಭಿಸಲಾಯಿತು. ಆ ಬಳಿಕ, ಅಲ್ಲೀಪುರದ ಕಂಟೋನ್ಮಂಟ್ ಪ್ರದೇಶದಲ್ಲೊಂದು ಜೈಲು, ಕ್ಷಯ ರೋಗಿಗಳಿಗೋಸ್ಕರವೇ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಮತ್ತೊಂದು ಜೈಲನ್ನು ಪ್ರಾರಂಭಿಸಲಾಗುತ್ತದೆ. ಮದ್ರಾಸ್ ಪ್ರಾಂತ್ಯದ ಕಡಪ, ಕರ್ನೂಲ್, ಅನಂತಪುರ ಹಾಗೂ ಬಳ್ಳಾರಿ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಮೂರು ಜೈಲುಗಳಲ್ಲಿ ಸೆರೆ ಹಿಡಿಯಲಾಗುತ್ತದೆಂದು ಇತಿಹಾಸದಿಂದ ತಿಳಿದು ಬರುತ್ತದೆ.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ, ಅಂದಾಜು ನಾಲ್ಕು ಗಂಟೆಗಳಕಾಲ ಬಳ್ಳಾರಿಯ ರೈಲು ನಿಲ್ದಾಣದಲ್ಲಿ ತಂಗಿದ್ದರು. ಜಿಲ್ಲೆಯ ಸಂಡೂರು ತಾಲೂಕಿನ ನಾನಾ ದೇಗುಲಗಳಿಗೆ ದಲಿತರ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ರಾಜಮಹಾರಾಜರ ಕಾರ್ಯಕ್ಕೆ ಗಾಂಧೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲಿಂದ ನೇರವಾಗಿ ಕೂಡ್ಲಿಗಿ ತಾಲೂಕಿಗೆ ಭೇಟಿ ನೀಡಿದ್ದರು ಎಂಬುದಕ್ಕೆ ಅಲ್ಲಿರುವ ಗಾಂಧೀಜಿಯವರ ಚಿತಾಭಸ್ಮ ಸಾಕ್ಷಿಯಾಗಿದೆ.

ಗಣಿ ಜಿಲ್ಲೆಯ ಆಯ್ದ ತಾಲೂಕಿನಿಂದಲೂ ಈ ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಅವರೂ ಕೂಡ ಈ ಮೂರು ಜೈಲುಗಳಲ್ಲಿ ಸೆರೆಮನೆ ವಾಸವಾಗಿದ್ದರು. ಹೀಗಾಗಿ, ಅವರ ಸ್ಮರಣೆಯನ್ನು ಈ ಸಂದರ್ಭದಲ್ಲಿ ಮಾಡೋದು ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಜಿಲ್ಲೆಯ ಕೊಡುಗೆ ಕುರಿತು ಇತಿಹಾಸಕಾರರು ಈ ರೀತಿಯಾಗಿ ಸ್ಮರಣೆ ಮಾಡಿದ್ದಾರೆ.

ಗಾಂಧಿಭವನದ ನಿರ್ವಾಹಕ ಟಿ.ಜಿ.ವಿಠಲ ‌ಅವರು ಮಾತನಾಡಿ, ಇಲ್ಲಿನ ಜೈಲುಗಳು ಮಾಪಳ ದಂಗೆಕೋರರ ನೆಲೆಯಾಗಿತ್ತು. ದಕ್ಷಿಣ ಭಾರತದ ಅಗ್ರಗಣ್ಯರ ಸ್ಥಳವಾಗಿ ಬಳ್ಳಾರಿ ಜೈಲುಗಳು ಮಾರ್ಪಟ್ಟಿರುವುದು ಬಹುಮುಖ್ಯವಾಗಿದೆ. ಬಳ್ಳಾರಿಯ ಬಿಂದು ಮಾಧವ, ಠೇಕೂರ ಸುಬ್ರಮಣ್ಯಂ, ಬಜಾರ್ ವೆಂಕಟ ರಮಣಾಚಾರ್ಯ, ಬಾದನಹಟ್ಟಿ ವೆಂಕೋಬರಾವ್, ಮತ್ತಿಹಳ್ಳಿ ರಾಘವೇಂದ್ರರಾವ್, ವಡ್ಡಿ ವೆಂಕೋಬರಾವ್, ಡಿ.ಎಚ್.ಕೃಷ್ಣರಾವ್ ಅವರು ಈ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಠೇಕೂರ್ ರಾಮನಾಥ ಅವರ ಮನೆಯಂತೂ ಆಗೀನಕಾಲದ ಔಟ್ ಪೋಸ್ಟ್ ಪೊಲೀಸ್ ಠಾಣೆಯಾಗಿ ಕಾರ್ಯನಿರ್ವಹಿಸಿತ್ತು ಎಂಬುದು ಈಗ ಇತಿಹಾಸ.

ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣನವರು ಮಾತನಾಡಿ, ಜಿಲ್ಲೆಯ ಮದ್ರಾಸ್ ಪ್ರಾಂತ್ಯಕ್ಕೆ ಹಡಗಲಿ, ಹರಪನಹಳ್ಳಿ, ಬಳ್ಳಾರಿ ಹಾಗೂ ಸಿರುಗುಪ್ಪ ತಾಲೂಕಿನವರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು. ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಈಜಾರಿ ಶಿರಸಪ್ಪನವರು, ಮುದೇನೂರು ಸಂಗಣ್ಣನವರು, ಹಡಗಲಿಯ ಮಾಮಾ ಪಾಟೀಲ, ಬಳ್ಳಾರಿಯ ಯಜಮಾನ ಶಾಂತರುದ್ರಪ್ಪ, ಬುರ್ಲಿ ಮಾಧವರಾವ್, ಬಿಂದುರಾವ್, ಪಿ.ಬಿ.ಕೇಶವರಾವ್, ಕೊಟ್ಟೂರಿನ ಗುರ್ಲಿ ಶರಣಪ್ಪ, ಕೂಡ್ಲಿಗಿಯ ತೂಲದಹಳ್ಳಿಯ ಬಸಪ್ಪ, ಬಾಚಿಗೊಂಡನಹಳ್ಳಿಯ ಚನ್ನಬಸವಗೌಡರು, ಸೊನ್ನದ ಈಶ್ವಪ್ಪ, ಹಂಪಾಪಟ್ಟಣದ ಈಶಪ್ಪ, ಹಗರಿಬೊಮ್ಮನಹಳ್ಳಿ ಬಾರಿಕರ ಯಲ್ಲಪ್ಪ, ಆಲ್ದಾಳ್ ಹಾಲಪ್ಪನವ್ರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಪಾಲ್ಗೊಂಡಿದ್ದರು ಎಂದು ಅವರು ಸ್ಮರಿಸಿದರು.

ಹಿರಿಯ ಪತ್ರಕರ್ತ ಮತ್ತಿಹಳ್ಳಿ ಅಹಿರಾಜ ಅವರು ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಭಾಗಿಯಾಗಿದ್ದವರನ್ನು ಬಳ್ಳಾರಿ ಜೈಲಿಗೆ ಕರೆತಂದ ಸಂದರ್ಭ ಆ ಹೋರಾಟಗಾರರಲ್ಲಿ ಭಾಷಾಬಾಂಧವ್ಯ ಬೆಳೆಸೋದರ ಜೊತೆಜೊತೆಗೆ ಯುವಜನರಿಗೆ ಸ್ಪೂರ್ತಿದಾಯಕವೂ ಆಗಿತ್ತು ಎಂದರು.

ABOUT THE AUTHOR

...view details