ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ಜೂನ್ ತಿಂಗಳಿಂದಲೂ ಸತತವಾಗಿ ಸುರಿದ ಮಹಾಮಳೆಗೆ ಸಣ್ಣ ಹಾಗೂ ಅತೀ ಸಣ್ಣ ರೈತರ ಬದುಕು ನಿಜಕ್ಕೂ ಮುರಾಬಟ್ಟೆಯಾಗಿದೆ. ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದ ಪರಿಣಾಮ ನೂರಾರು ಹೆಕ್ಟೇರ್ ಪ್ರದೇಶದಲ್ಲಿನ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಜಿಲ್ಲಾಡಳಿತ ಕೂಡ ಪ್ರವಾಹದ ಭೀತಿಯನ್ನ ಸಮರ್ಥವಾಗಿ ಎದುರಿಸಲು ಸನ್ನದ್ಧವಾಗಿದ್ದು, ಈಗಾಗಲೇ ಬೆಳೆ ನಷ್ಟದ ಸಮೀಕ್ಷೆ ಕಾರ್ಯವನ್ನ ಬಹಳ ವೇಗವಾಗಿ ಮಾಡುತ್ತಿದೆ. ಜೀವ ಹಾನಿ, ಭಾಗಶಃ ಮನೆಗಳ ಕುಸಿತ ಹಾಗೂ ಬಹುತೇಕ ಮನೆಗಳ ಕುಸಿತ ಸೇರಿದಂತೆ ಇನ್ನಿತರೆ ಪರಿಹಾರ ನೀಡುವಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸಫಲರಾಗಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಿನ ಮಳೆ ಸುರಿದಿದೆ. ಅಂದಾಜು ಆರು ತಾಲೂಕಗಳನ್ನು ನೆರೆಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಲಾಗಿದೆ. ಸಿರುಗುಪ್ಪ, ಹೊಸಪೇಟೆ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಮತ್ತು ಹೂವಿನ ಹಡಗಲಿ ತಾಲೂಕುಗಳಲ್ಲಿ ಅತೀ ಹೆಚ್ಚಿನ ಮಳೆ ಸುರಿದಿದ್ದು, ಅಂದಾಜು 300 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಷ್ಟ ಉಂಟಾಗಿದೆ ಎಂದರು.
ಮಳೆಯಿಂದಾಗಿ ಎರಡು ಜೀವಹಾನಿಯಾಗಿದ್ದು, ಸುಮಾರು 20 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ. ಎರಡು ಮನೆಗಳು ಬಹುತೇಕ ಕುಸಿದು ಬಿದ್ದಿದ್ದು, ಈಗಾಗಲೇ ಪರಿಹಾರಧನ ವಿತರಿಸಲಾಗಿದೆ. 650ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಈರುಳ್ಳಿ ಬೆಳೆಗೆ ಕೊಳೆರೋಗ ತಗುಲಿರುವ ಹಿನ್ನೆಲೆ ಈಗಾಗಲೇ ಸಮೀಕ್ಷೆ ಕಾರ್ಯವನ್ನು ಕೈಗೊಂಡಿದ್ದು, ಪರಿಹಾರಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.