ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಮುಸ್ಲಿಂ ಧರ್ಮೀಯರ ಪವಿತ್ರ ರಂಜಾನ್ ಹಬ್ಬದ ಸಂಭ್ರಮ ಎಲ್ಲೆಡೆ ಪಸರಿಸಿದೆ. ಅದರಲ್ಲೂ ಅರೇಬಿಯನ್ ಚಿಕನ್ ಹಲೀಂ ಗೂ (ಹೈದರಾಬಾದಿನಲ್ಲಿ ಖ್ಯಾತಿ ಹೊಂದಿರುವ ಹಲೀಂ) ಎಲ್ಲಿಲ್ಲದ ಬಹುಬೇಡಿಕೆ ಶುರುವಾಗಿದೆ.
ಹೌದು, ನೀವು ಕೂಡ ಚಿಕನ್ ಹಲೀಂ ಖಾದ್ಯದ ಸವಿರುಚಿ ನೋಡಬೇಕಾ. ಹಾಗಾದ್ರೆ ಒಮ್ಮೆ ಬಳ್ಳಾರಿ ನಗರದ ಕೌಲ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅಜೀಮ್ ಫಾಸ್ಟ್ ಫುಡ್ ಅಂಗಡಿ ಮಳಿಗೆಗೆ ಭೇಟಿ ಕೊಡಿ. ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯಲ್ಲಿ ಸಂಜೆಯೊತ್ತಿಗೆ ಒಮ್ಮೆ ಸಂಚರಿಸಿದರೆ ಸಾಕು. ಎಲ್ಲೆಡೆಯೂ ಚಿಕನ್ ಹಲೀಂ ಖಾದ್ಯದ ಘಮಲು ನಿಮ್ಮ ಮೂಗಿಗೆ ಬಡಿಯುತ್ತದೆ. ಅದರ ಸುಗಂಧದ ವಾಸನೆಯ ಜಾಡು ಹಿಡಿದು ಅಜೀಮ್ ಫಾಸ್ಟ್ ಫುಡ್ ಸೆಂಟರ್ ನತ್ತ ಹೊರಟವರೇ ಹೆಚ್ಚು.
ರಂಜಾನ್ ಹಬ್ಬ ಶುರುವಾದಾಗಿಂದಲೂ ಮುಸ್ಲಿಂಮರು ವ್ರತಾಚರಣೆ ಪ್ರಾರಂಭಿಸುತ್ತಾರೆ. ವ್ರತನಿಷ್ಠ ಮುಸ್ಲಿಂಮರು ಸಂಜೆಯೊತ್ತಿಗೆ ಉಪವಾಸ ಕೈಬಿಟ್ಟ ಬಳಿಕ ಸೇವಿಸಲು ಬಯಸುವ ಖಾದ್ಯವೆಂದರೆ ಈ ಹಲೀಂ.
ಸೌದಿ ಅರೇಬಿಯನ್ ಮಾದರಿ ಹಲೀಂ ತಯಾರಿಕೆ: ಹೈದರಾಬಾದಿನಲ್ಲಿ ಹಲೀಂ ಖಾದ್ಯ ಭಾರಿ ಖ್ಯಾತಿ ಪಡೆದಿದೆ. ನಾವೀಗ ಸೌದಿ ಅರೇಬಿಯನ್ ಮಾದರಿಯಲ್ಲೇ ಈ ಖಾದ್ಯ ತಯಾರಿಕೆ ಮಾಡಲಾಗುತ್ತಿದೆ. ಹೀಗಾಗಿ ಅರೇಬಿಯನ್ ಚಿಕನ್ ಹಲೀಂ ಎಂದೇ ಹೆಸರಿಡಲಾಗಿದೆ. ಭಾರತೀಯ ಮಸಾಲ ಸೇರಿ ಇತರ ಅಡುಗೆ ಪದಾರ್ಥಗಳನ್ನು ಬಳಕೆ ಮಾಡಿಕೊಂಡೇ ಈ ಹಲೀಂ ತಯಾರಿಸಲಾಗುತ್ತದೆ.