ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯದ ಭಾಗದಲ್ಲಿ ಸತತ ಒಂದು ತಿಂಗಳಿಂದ ಉತ್ತಮ ಮಳೆಯಾಗುತ್ತಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಕೋವಿಡ್ನಿಂದ ತತ್ತರಿಸಿ ಹೋಗಿದ್ದ ಜನರಿಗೆ ಇದು ಸಂತಸ ವಿಷಯವಾಗಿದೆ. ತುಂಗಭದ್ರಾ ಜಲಾಶಯ ಲಕ್ಷಾಂತರ ಎಕರೆ ನೀರುಣಿಸುವ ಗಂಗೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರುವಂತಾಗಿದೆ.
ತುಂಗಭದ್ರಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್ ತುಂಗಭದ್ರಾ ಜಲಾಶಯ ಕರ್ನಾಟಕ ಮಾತ್ರ ಸಿಮೀತವಾಗಿಲ್ಲ. ನೆರೆಯ ಆಂಧ್ರಪ್ರದೇಶದ ಹಾಗೂ ತೆಲಂಗಾಣದ ರಾಜ್ಯದ ಜೀವಗಂಗೆಯಾಗಿದೆ. ತುಂಗಭದ್ರಾ ಜಲಾಶಯ 34, 923 ಹೆಕ್ಟೇರ್ ಪ್ರದೇಶ ವ್ಯಾಪಿಸಿಕೊಂಡಿದೆ. ಕೇವಲ ಕೃಷಿಗೆ ಅಷ್ಟೇ ಅಲ್ಲ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಸಹಕಾರಿಯಾಗಿದೆ.
ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಳ: ಸದ್ಯ ತುಂಗಭದ್ರಾ ಜಲಾಶಯದಲ್ಲಿ 10.646 ಟಿಎಂಸಿ ನೀರು ಸಂಗ್ರಹವಾಗಿದೆ. 1591.05 ಅಡಿ ಇದೆ. ಜಲಾಶಯಕ್ಕೆ 7,113 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿ ನಾಲ್ಕು ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಸಂದರ್ಭದಲ್ಲಿ 6.121 ಟಿಎಂಸಿ ನೀರು ಸಂಗ್ರಹವಾಗಿತ್ತು. 1584.14 ಅಡಿ ಇದ್ದು, 100 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು.
ತುಂಗಾ ಡ್ಯಾಂ ಭರ್ತಿ: ಈಗಾಗಲೇ ಶಿವಮೊಗ್ಗದ ತುಂಗಾ ಡ್ಯಾಂ ಭರ್ತಿಯಾಗಿದ್ದು, ನದಿಗೆ ನೀರನ್ನು ಹರಿ ಬಿಡಲಾಗುತ್ತಿದೆ. ತುಂಗಭದ್ರಾ ಜಲಾಶಯ ಒಳ ಹರಿವು ಹೆಚ್ಚಳವಾಗಲು ಇದೊಂದು ಕಾರಣವಾಗಿದೆ. ಅಲ್ಲದೇ, ಸಿಂಗಟಾಲೂರು ಬ್ಯಾರೇಜ್ ನಿಂದ ಸಹ ನದಿಗೆ ನೀರನ್ನು ಹರಿಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರಿಗೆ ವರದಾನವಾಗಿದೆ.
ಜುಲೈನಲ್ಲಿ ಕಾಲುವೆಗಳಿಗೆ ನೀರು?: ತುಂಗಭದ್ರಾ ಜಲಾಶಯದಲ್ಲಿ ಈ ಬಾರಿ ಉತ್ತಮ ಒಳಹರಿವು ದಾಖಲಾಗಿದೆ. 50 ಟಿಎಂಸಿ ಸಂಗ್ರಹವಾಗಿ, ಉತ್ತಮ ಒಳಹರಿವು ದಾಖಲಾದರೇ ಜುಲೈ ತಿಂಗಳಿನಲ್ಲಿ ನೀರು ಹರಿಸುವ ಚಿಂತನೆ ಇದೆ ಎಂದು ತುಂಗಭದ್ರಾ ಜಲಾಶಯ ಅಧಿಕಾರಿಗಳು ಹೇಳುತ್ತಾರೆ.
ಈಟಿವಿ ಭಾರತ್ದೊಂದಿಗೆ ತುಂಗಭದ್ರಾ ಆಡಳಿತ ಮಂಡಳಿಯ ಕಾರ್ಯದರ್ಶಿ ಜಿ. ನಾಗಮೋಹನ್ ಅವರು ಮಾತನಾಡಿ, ತುಂಗಭದ್ರಾ ಜಲಾಶಯಕ್ಕೆ ಇನ್ನು ಒಂದು ವಾರದಲ್ಲಿ 5 ಟಿಎಂಸಿ ನೀರು ಹರಿದು ಬರಲಿದೆ. ಕಳೆದ ವರ್ಷ ಜುಲೈ 31 ರಲ್ಲಿ ನೀರನ್ನು ಬಿಡಲಾಗಿತ್ತು. ಆದರೆ, ಈ ಬಾರಿ ಜುಲೈ 15 ಕ್ಕೆ ಕಾಲುವೆಗಳಿಗೆ ನೀರು ಹರಿಸುವ ಆಲೋಚನೆ ಇದೆ. ಈ ಬಾರಿ ಮಾನ್ಸೂನ್ ಒಳಹರಿವು ಹೆಚ್ಚಿಸಿದೆ ಎಂದರು.
ಓದಿ:ಬಿಎಸ್ವೈ ನಾಯಕತ್ವಕ್ಕ ಜೈ ಎಂದ ಅರುಣ್ ಸಿಂಗ್.. ಭಿನ್ನಮತೀಯರಿಗೆ ನೀಡಿದ್ರು ಬಿಗ್ ಶಾಕ್..!