ವಿಜಯನಗರ: ನಮ್ಮ ಕುಟುಂಬದ ವಿರುದ್ಧ ಇನಾಂ ಭೂಮಿ ಪರಭಾರೆ ಬಗ್ಗೆ ಆರೋಪ ಮಾಡಿದವರ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಿರುವೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ತಾಲೂಕಿನ ವೆಂಕಟಾಪುರದಲ್ಲಿ ಗುರುವಾರ ಕೆರೆ ತುಂಬಿಸುವ ಯೋಜನೆ ಕಾಮಗಾರಿ ಉದ್ಘಾಟಿಸಿದ ನಂತರ ಮಾಧ್ಯಮದವರ ಜತೆಗೆ ಮಾತನಾಡಿದರು. 11 ಜನ ಇನಾಂ ಜಮೀನು ಕಬಳಿಸಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರಜಾಸೇನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್. ಕುಮಾರಸ್ವಾಮಿ ಅವರು ಆರೋಪ ಮಾಡಿದ್ದಾರೆ. ಅದರಲ್ಲಿ ನನ್ನ ಹೆಸರಿಲ್ಲ. ನನ್ನ ಮಗ ಸಿದ್ದಾರ್ಥ ಸಿಂಗ್, ಭಾಮೈದ ಧರ್ಮೇಂದ್ರ ಸಿಂಗ್ ಹೆಸರಿದೆ. ಇತರೆ ಒಂಬತ್ತು ಜನ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ವಿವರಣೆ ನೀಡಿದರು.
ಹಿಂದೆ 50 ಲಕ್ಷಕ್ಕೆ ಬೇಡಿಕೆ, ಈಗ ಬ್ಲ್ಯಾಕ್‌ಮೇಲ್:ಕುಮಾರಸ್ವಾಮಿ ಸುಮಾರು ವರ್ಷಗಳ ಹಿಂದೆ ಬೇರೆಯವರ ಮೂಲಕ ನನ್ನ ಬಳಿ ಬಂದಿದ್ದರು. ಜಮೀನಿನ ಕುರಿತು ಹೇಳಿದಾಗ ನನ್ನ ಮಗ ಖರೀದಿಸಿದರೆ ಅದರಲ್ಲಿ ತಪ್ಪೇನಿದೆ ಎಂದಿದ್ದೆ. ನಿಮ್ಮ ವಿರುದ್ಧ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದರು. ಅಷ್ಟೇ ಅಲ್ಲದೇ ಬೇರೆಯವರ ಮೂಲಕ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನನ್ನ ಮಗ ಸ್ವತಃ ಎಲ್‌ಎಲ್‌ಬಿ ಪದವೀಧರ. ಅವನಿಗೆ ಕಾನೂನಿನ ಜ್ಞಾನವಿದೆ. ವಕೀಲರೊಂದಿಗೆ ಚರ್ಚಿಸಿದ್ದು, ಮಾನನಷ್ಟ ಮೊಕದ್ದಮೆ ಹೂಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ತಪ್ಪು ಮಾಡಿಲ್ಲ ಸಂಧಾನಕ್ಕೆ ಒಪ್ಪಲಿಲ್ಲ:ಕುಮಾರಸ್ವಾಮಿ ಬೆಂಗಳೂರಿಗೆ ಬಂದು ಮಾತನಾಡಿದ್ದರು. ಅವರು ಕೇಳಿದಷ್ಟು ಹಣ ಕೊಟ್ಟಿಲ್ಲ. ಅವರ ಆಡಿಯೋಗಳು ನನ್ನ ಹತ್ತಿರ ಕೂಡ ಇವೆ. ಈಗ ಚುನಾವಣೆ ಸಂದರ್ಭ ಇರುವುದರಿಂದ ನನ್ನ ಟಾರ್ಗೆಟ್ ಮಾಡಿರುವುದು ಎದ್ದು ಕಾಣುತ್ತದೆ ಎಂದು ಸಚಿವರು ಹೇಳಿದರು.
ಹಾಲಿ ನಗರಸಭೆಯ ಪಕ್ಷೇತರ ಸದಸ್ಯ ಅಬ್ದುಲ್ ಖದೀರ್ ಅವರ ಹೆಸರು ರೌಡಿಶೀಟರ್ ಪಟ್ಟಿಯಲ್ಲಿದೆ. ಅದೇ ರೀತಿ ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ್ ಕೂಡ ರೌಡಿಶೀಟರ್. ಇದೆಲ್ಲ ರೌಡಿಶೀಟರ್‌ಗಳ ಒಂದು ಗುಂಪು ಇದ್ದ ಹಾಗೆ ಕಾಣಿಸುತ್ತಿದೆ. ಇದೇ ಅಬ್ದುಲ್ ಖದೀರ್ ನಾನು ಸರ್ಕಾರಿ ಜಮೀನು ಅತಿಕ್ರಮಿಸಿ ಮನೆ ಕಟ್ಟಿದ್ದೇನೆ ಎಂದು ಆರೋಪಿಸಿ ಕೋರ್ಟ್‌ಗೆ ಪಿಐಎಲ್ ಹಾಕಿದ್ದಾರೆ. ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ಇವರೇ ನನ್ನೊಂದಿಗೆ ಸಂಧಾನಕ್ಕೆ ಬಂದಿದ್ದರು. ನಾನು ತಪ್ಪು ಮಾಡಿಲ್ಲ. ಸಂಧಾನಕ್ಕೆ ಒಪ್ಪಲಿಲ್ಲ. ಈಗ ಇವರೆಲ್ಲ ಒಂದೆಡೆ ಸೇರಿದ್ದಾರೆ. ಇವರೆಲ್ಲರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದು ಸಚಿವರು ಎಚ್ಚರಿಕೆ ನೀಡಿದರು.
ಎಂಟು ಜನರ ಹೆಸರಿನಲ್ಲಿ ಬೇನಾಮಿ ಆಸ್ತಿ ಆರೋಪ: ಸಂಡೂರಿನ ಎಮ್ಮಿಹಟ್ಟಿ ಗ್ರಾಮದಲ್ಲಿ ಕುಮಾರಸ್ವಾಮಿ ದೇವಾಲಯಕ್ಕೆ ಸೇರಿದ 180 ಎಕರೆ ಇನಾಮ ಜಮೀನು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ ಸಿಂಗ್ ಠಾಕೂರ್, ಬಾಮೈದ ಧರ್ಮೇಂದ್ರ ಸಿಂಗ್, ಅಬ್ದುಲ್ ರಹೀಮ್ ಮತ್ತು ಇತರೆ ಎಂಟು ಜನರ ಹೆಸರಿನಲ್ಲಿ ಸಚಿವರು ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು ಎಂದು ಆನಂದ್ ಸಿಂಗ್ ತಿಳಿಸಿದರು.