ಬಳ್ಳಾರಿ:ನರೇಂದ್ರ ಮೋದಿ ಅವರ ಇಚ್ಛೆಯಂತೆ ದೇಶದ ಎಲ್ಲಾ ಜನರು ಆರೋಗ್ಯವಂತರಾಗಿರಬೇಕು. ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಸೌಲಭ್ಯಗಳು ಸಿಗುವಂತೆ ಕೆಲಸ ಮಾಡುತ್ತೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಭರವಸೆ ನೀಡಿದರು.
ನಗರದ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಇಂದು 'ಸಿ' ಮತ್ತು 'ಡಿ' ಗ್ರೂಪ್ ನೌಕರರ ವಸತಿ ಗೃಹಗಳು, ಸ್ಕೂಲ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯ ಹಾಗೂ ಡಿಎನ್‌ಬಿ ಸೆಮಿನಾರ್ ಹಾಲ್ ಕಟ್ಟಡ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು. ಬಳ್ಳಾರಿಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಈ ಸಮಾರಂಭ ಜರುಗಿತು.
7 ಕೋಟಿ 64 ಲಕ್ಷ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಸಚಿವ ಶ್ರೀರಾಮುಲು ಮಾತನಾಡಿದರು. ನರೇಂದ್ರ ಮೋದಿ ಅವರ ಇಚ್ಛೆಯಂತೆ ದೇಶದ ಜನರು ಆರೋಗ್ಯವಂತರಾಗಿರಬೇಕು. ಯಾವುದೇ ಬೇದ ಭಾವವಿಲ್ಲದೇ ಎಲ್ಲರಿಗೂ ಸೌಲಭ್ಯಗಳು ಸಿಗುವ ಕೆಲಸ ಮಾಡುತ್ತೇನೆ. ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ 500 ಬೆಡ್ ವ್ಯವಸ್ಥೆ ಮಾಡಲು ಮುಂದಾಗುತ್ತೇನೆ. ಕಲ್ಯಾಣ ಕರ್ನಾಟಕ ಆರು ಜಿಲ್ಲೆಗಳ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಅದಕ್ಕೆ ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವಿಕೆ ಮತ್ತು ಮೇಲ್ದರ್ಜೆಗೇರಿಸುವಿಕೆಗೆ ಸಂಭಂಧಿಸಿದಂತೆ ಬಜೆಟ್ನಲ್ಲಿ ಸೇರ್ಪಡೆ ಮಾಡಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದರು.
ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಜನರಿಕ್ ಔಷಧ ಕೇಂದ್ರ ಆರಂಭಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯಲ್ಲೂ ಶೀಘ್ರವಾಗಿ ಜನರಿಕ್ ಔಷಧ ಕೇಂದ್ರ ಆರಂಭಿಸಲಾಗುತ್ತದೆ. ಹೀಗಾಗಿ ಇನ್ನುಮುಂದೆ ರೋಗಿಗಳಿಗೆ ಔಷಧಿಗಾಗಿ ಹೊರಚೀಟಿ ಬರೆದುಕೊಡಬಾರದು ಎಂದು ಸೂಚಿಸಿದರು.