ಬಳ್ಳಾರಿ: ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಹಿಂದೆಂದೂ ನೋಡಿಲ್ಲ. ಮೋದಿ ಪ್ರಧಾನಿಯಾದ ನಂತರ ಧರ್ಮ ಆಧಾರಿತ ಜಾತಿ ರಾಜಕಾರಣ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮಾಡಿದರು.
ಬಳ್ಳಾರಿಯ ಗುರು ಫಂಕ್ಷನ್ ಹಾಲ್ನಲ್ಲಿ ಭಾರತ್ ಜೋಡೋ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿಯನ್ನು ವಿರೋಧಿಸಿದರೆ, ಪ್ರಶ್ನಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕುತ್ತಾರೆ. ಸಿಬಿಐ, ಇಡಿ, ಅದಾಯ ತೆರಿಗೆ ಇಲಾಖೆಯ ಮೂಲಕ ಹೆದರಿಸಲಾಗುತ್ತಿದೆ ಎಂದರು.
ಭಾರತ್ ಜೋಡೋ ಯಾತ್ರೆ ರಾಜಕೀಯ ಲಾಭಕ್ಕಾಗಿ ನಡೆಯುತ್ತಿಲ್ಲ, ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಾದಯಾತ್ರೆ ಮಾಡುತ್ತಿಲ್ಲ. ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಭಯದ ವಾತಾವರಣದಲ್ಲಿ ಬದುಕುವ ಜನರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ನಡೆಯುತ್ತಿದೆ ಎಂದು ಹೇಳಿದರೆ, ಅದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದಾಖಲೆ ಕೇಳುತ್ತಾರೆ. ಆದರೆ ಕಳೆದ ಬಾರಿ ಚುನಾವಣೆ ಪ್ರಚಾರದಲ್ಲಿ ಮೋದಿಯವರು ರಾಜ್ಯ ಸರ್ಕಾರ ಶೇ 10ರಷ್ಟು ಕಮಿಷನ್ ಎಂದು ಆರೋಪ ಮಾಡಿದ್ದರು. ಆಗ ಮೋದಿ ಬಳಿ ಏನಾದರೂ ದಾಖಲಾತಿ ಇತ್ತೆ ಎಂದು ಪ್ರಶ್ನಿಸಿದರು.
ಗೋಡ್ಸೆ ಫೋಟೋದೊಂದಿಗೆ ಗಣೇಶ ಪೂಜೆ:ಬಿಜೆಪಿ ಅವರು ಸಾವರ್ಕರ್ ಮತ್ತು ಗೋಡ್ಸೆ ಪೋಟೋ ಹಾಕಿ ಗಣೇಶ ಹಬ್ಬದಲ್ಲಿ ಪೂಜೆ ಮಾಡುತ್ತಾರೆ. ನಾಥುರಾಮ್ ಗೋಡ್ಸೆ ಗಾಂಧಿಯನ್ನು ಕೊಂದ ಕೊಲೆಗಡುಕ. ಸಾವರ್ಕರ್ ಬ್ರಿಟಿಷ್ ಸರ್ಕಾರದಿಂದ ಪೆನ್ಷನ್ ಪಡೆದುಕೊಳುತ್ತಿದ್ದ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಬಳ್ಳಾರಿಯಲ್ಲಿ ನಡೆದ ಮುಖಂಡರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಕಿಡಿಕಾರಿದರು.
ಸಾವರ್ಕರ್ ಹಿಂದೂ ಮುಸ್ಲಿಂ ಒಟ್ಟಾಗಿ ಇರುವುದಕ್ಕೆ ಆಗೋದಿಲ್ಲ, ಎರಡು ದೇಶ ಆಗಬೇಕು ಎಂದು ಹೇಳಿದ ಮೇಲೆಯೇ ಜಿನ್ನಾ ಇಬ್ಭಾಗದ ಬಗ್ಗೆ ಹೇಳಿದ್ದರು. ನಮ್ಮ ಕಾಲದಲ್ಲಿ ಎಸ್ಸಿ ಎಸ್ಟಿಗೆ ಮೀಸಲಾತಿ ನೀಡಲು ನಾಗಮೋಹನ್ ದಾಸ್ ಆಯೋಗ ರಚನೆ ಮಾಡಲಾಗಿತ್ತು. ಶ್ರೀರಾಮುಲು ಅಧಿಕಾರಕ್ಕೆ ಬಂದು 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸುತ್ತೇವೆ, ಇದನ್ನು ರಕ್ತದಲ್ಲಿ ಬರೆದುಕೊಡುತ್ತೇವೆ ಎಂದಿದ್ದ. ಅಧಿಕಾರಕ್ಕೆ ಬಂದು ಇಷ್ಟು ದಿನಗಳವರೆಗೆ ರಕ್ತ ಇರಲಿಲ್ಲವಾ ಎಂದು ಶ್ರೀರಾಮುಲು ಅವರನ್ನು ಗೇಲಿ ಮಾಡಿದರು.
ಅ.15ರಂದು ನಡೆಯುವ ಜೋಡೋ ಯಾತ್ರೆಯಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ಬಳ್ಳಾರಿ ಕಾಂಗ್ರೆಸ್ನ ಭದ್ರಕೋಟೆ, ಬಳ್ಳಾರಿ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂದರು. ಮೋದಿ, ಅಮಿತ್ ಷಾ, ಬೊಮ್ಮಾಯಿಯನ್ನು ಯಾರು ಪ್ರಶ್ನೆ ಮಾಡಂಗಿಲ್ಲ, ನಾವು 40 ಪರ್ಸೆಂಟ್ ಸರ್ಕಾರ ಅಂತಾ ಪೋಸ್ಟ್ ಅಂಟಿಸಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕ್ತಾರೆ ಎಂದರು.
ಜನ ಅವರಿಗೆ ವೋಟು ಕೊಟ್ಟಿಲ್ಲ, ಕೋಟ್ಯಂತರ ಲಂಚದ ಹಣ ಕೊಟ್ಟು ಸರ್ಕಾರ ನಡೆಸುತ್ತಿದ್ದಾರೆ. ನಮ್ಮ 14 ಶಾಸಕರು ಹಾಗೂ ಮೂರು ಜೆಡಿಎಸ್ನವರನ್ನು ದುಡ್ಡು ಕೊಟ್ಟು ಕೊಂಡುಕೊಂಡರು. ಆನಂದ್ ಸಿಂಗ್ ನಮ್ಮ ಪಕ್ಷಕ್ಕೆ ಬಂದಿದ್ದ ಗಿರಾಕಿ, ದುಡ್ಡು ತಗೊಂಡು ಹೊರಟೋಗ್ಬಿಟ್ಟ. ಇವರೆಲ್ಲ ಸೇರಿಕೊಂಡು ಸಮಾಜವನ್ನು ಒಡೆಯುತ್ತಿದ್ದಾರೆ ಎಂದರು.
ಇದನ್ನೂ ಓದಿ:ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು