ಬಳ್ಳಾರಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದ ಕುರಿತು ನಾನೇನೂ ಪ್ರತಿಕ್ರಿಯಿಸಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನಿನ ಅನುಸಾರವಾಗಿ ಈ ಪ್ರಕರಣ ನಡಿಯುತ್ತಿದೆ. ಹೀಗಾಗಿ, ಇದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ನಾನು ಡಿಕೆಶಿಗೆ ಕ್ಷಮೆ ಕೇಳಿದ್ದೀನಿ. ರಾಜಕೀಯದಲ್ಲಿ ವಾಕ್ಸಮರ ಸಂಪ್ರದಾಯದ ರೀತಿ ನಡೆದುಕೊಂಡು ಹೋಗುತ್ತಿದೆ. ಇದು ವೈಯಕ್ತಿಕ ಬದುಕಿನ ಮೇಲೆ ಪರಿಣಮ ಬೀರಬಾರದು. ರಾಜಕೀಯವಾಗಿ ಟೀಕೆ ಮಾಡೋದು ಬೇರೆ. ವೈಯಕ್ತಿಕವಾಗಿ ಆರೋಪ ಮಾಡುವುದು ಸರಿಯಲ್ಲ. ಇಂತಹ ಅನೇಕ ಪ್ರಕರಣಗಳನ್ನು ನಾನು ನೋಡಿದ್ದೀನಿ. ಕಾನೂನು ತನ್ನ ಕೆಲಸ ಮಾಡಿಕೊಂಡು ಹೋಗುತ್ತದೆ. ಜನಾರ್ದನ ರೆಡ್ಡಿ ಬಂಧನ ಪ್ರಕರಣವನ್ನು ಈ ಪ್ರಕರಣಕ್ಕೆ ಥಳಕು ಹಾಕೋದು ಬೇಡ ಎಂದರು.
ಡಿಕೆಶಿ ಬಂಧನದ ಕುರಿತು ನಾನು ಮಾತನಾಡಿದರೆ ತಪ್ಪಾಗುತ್ತೆ: ಸಚಿವ ಶ್ರೀರಾಮುಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮ:
ಜಿಲ್ಲಾಸ್ಪತ್ರೆ ಆವರಣದಲ್ಲಿಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ ವ್ಯವಸ್ಥೆ ಸರಿಯಾಗಿರದ ಕುರಿತು ಮಹಿಳೆಯರು ಈಗಾಗಲೇ ನನ್ನ ಗಮನಕ್ಕೆ ತಂದಿದ್ದಾರೆ. ಆ ಕುರಿತು ಗಂಭೀರವಾಗಿ ಚಿಂತನೆ ನಡೆಸಿರುವೆ. ಅಂತಹ ಗುತ್ತಿಗೆದಾರರನ್ನು ಮೊದಲು ಡಿಸಿಯವರು ಪತ್ತೆ ಹಚ್ಚಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕೆಂದರು.
ದಪ್ಪ ಚರ್ಮದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಿಲು ಸೂಚನೆ:
ರಾಜಕೀಯ ನಾಯಕರ ದಪ್ಪ ಚರ್ಮದ ಹಿಂಬಾಲಕರು, ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ ನಿರ್ಮಾಣದ ಗುತ್ತಿಗೆ ಪಡೆದಿರೋ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಪರವಾನಗಿ ರದ್ದುಪಡಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ತಾಕೀತು ಮಾಡಿದರು. ದಪ್ಪ ಚರ್ಮದ ಗುತ್ತಿಗೆದಾರರು ಎಂತಹ ದೊಡ್ಡವರೇ ಆಗಿರಲಿ ರಕ್ಷಣೆ ಮಾಡೋ ಹಾಗಿಲ್ಲ ಎಂದರು.
ಜನೌಷಧಿ ಉಚಿತವಾಗಿ ನೀಡಲು ಚಿಂತನೆ:
ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು. ಆಶಾ ಕಾರ್ಯಕರ್ತೆಯರು ಸೇರಿದಂತೆ ನಾನಾ ಹಂತದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸಕಾಲಕ್ಕೆ ವೇತನ ಬಿಡುಗಡೆ ಮಾಡಿಸುವಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವೆ ಎಂದರು.