ಬಳ್ಳಾರಿ : ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪ ಸಾಗರ ಗ್ರಾಮದ ಗಂಡ-ಹೆಂಡತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಹೆಂಡತಿಯ ಸಹೋದರನನ್ನೇ ಕೊಲೆಗೈದ ಘಟನೆ ನಡೆದಿದೆ.
ಹಂಪಸಾಗರ ಗ್ರಾಮದ ನಿವಾಸಿ ಆಕಾಶ ನಾಯ್ಕ್ (23) ಕೊಲೆಗೀಡಾದ ವ್ಯಕ್ತಿಯೆಂದು ಗುರುತಿಸಲಾಗಿದೆ. ಹೂವಿನ ಹಡಗಲಿ ಕಾಲ್ವಿ ತಾಂಡಾದ ರವಿನಾಯ್ಕ ಎಂಬಾತನೇ ಕೊಲೆ ಮಾಡಿದ ಆರೋಪಿ. ಆತನನ್ನ ಹಗರಿಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ : ಕಳೆದ ಆರು ವರ್ಷಗಳ ಹಿಂದೆಯೇ ಜಿಲ್ಲೆಯ ಹಡಗಲಿ ತಾಲೂಕಿನ ಕಾಲ್ವಿ ತಾಂಡಾದ ನಿವಾಸಿ ರವಿನಾಯ್ಕ ಅವರು ಹಂಪಸಾಗರದ ಸೀಮಾ ಅವರನ್ನ ಮದುವೆಯಾಗಿದ್ದರು. ಅವರಿಬ್ಬರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಉಂಟಾಗಿದ್ದರಿಂದ ಸೀಮಾ ತನ್ನ ಮಕ್ಕಳೊಂದಿಗೆ ತವರೂರಾದ ಹಂಪಸಾಗರ ಗ್ರಾಮಕ್ಕೆ ಬಂದಿದ್ದರು.
ನಂತರ ನಡೆದ ರಾಜೀ ಸಂಧಾನದಲ್ಲೂ ಸೀಮಾಳನ್ನ ಕಳಿಸಿಕೊಡಲು ಕುಟುಂಬದರು ಒಪ್ಪಿದ್ದರು. ನಿನ್ನೆಯ ದಿನ ಬೆಳಗ್ಗೆ 11.30ರ ಸಮಯಕ್ಕೆ ಸೀಮಾಳ ಪತಿರಾಯ ರವಿನಾಯ್ಕ ಹಂಪಸಾಗರಕ್ಕೆ ಬಂದವನೇ ಪತ್ನಿ ಸೀಮಾಳೊಂದಿಗೆ ತಗಾದೆ ತೆಗೆದು, ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆನ್ನಲಾಗಿದೆ.
ಇವರಿಬ್ಬರ ನಡುವೆ ಬಂದ ಸೀಮಾಳ ತಾಯಿ ಕಮಲಾ ಬಾಯಿ ಸೇರಿ ಈ ಮೂರು ಜನರು ಜಗಳವಾಡುತ್ತಿರುವಾಗ ರವಿನಾಯ್ಕ, ಕೊಡಲಿಯಿಂದ ಇಬ್ಬರಿಗೂ ಹೊಡೆದು ಗಾಯಗೊಳಿಸಿ ಓಡಿ ಹೋಗಿದ್ದಾನೆ. ನಂತರ ಗ್ರಾಮ ಹೊರವಲಯ ಡಾಬಾದ ಬಳಿಯಿದ್ದ ಪತ್ನಿಯ ಸಹೋದರ, ಆಕಾಶ ನಾಯ್ಕನಿಗೂ ಕೈಯಲ್ಲಿದ್ದ ಕೊಡಲಿಯಿಂದ ಬಲವಾಗಿ ಕುತ್ತಿಗೆ ಮತ್ತು ತಲೆಗೆ ಹೊಡೆದ ಕಾರಣ ಸ್ಥಳದಲ್ಲೇ ಆಕಾಶ ನಾಯ್ಕ ಮೃತಪಟ್ಟಿದ್ದಾನೆ. ಈ ಕ್ಷುಲ್ಲಕ ಕಾರಣಕ್ಕೆ ಉಂಟಾದ ಕುಟುಂಬ ಕಲಹ ಪತ್ನಿಯ ಸಹೋದರನ ಕೊಲೆಯಲ್ಲಿ ಅಂತ್ಯಗೊಂಡಿದೆ.
ಇದನ್ನುಓದಿ :ಹುಬ್ಬಳ್ಳಿ ಲಾಡ್ಜ್ನಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಸೀಮಾ ಹಾಗೂ ಆಕೆಯ ತಾಯಿ ಕಮಲಾಬಾಯಿ ಅವರನ್ನ ಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳಿದ ತಕ್ಷಣವೇ ಎಎಸ್ಪಿ ಲಾವಣ್ಯ ಹಾಗೂ ಸಿಪಿಐ ಎಂ ಎಂ ಡಪ್ಪಿನ್, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.