ಹೊಸಪೇಟೆ: ಇಷ್ಟು ದಿನ ಕೊರೊನಾ ಭೀತಿಯಿಂದ ಮನೆಯೊಳಗಿದ್ದ ಜನರು ಇದೀಗ ಮಳೆಯಿಂದ ತುಂಬಿ ಹರಿಯುತ್ತಿರೋ ತುಂಗಭದ್ರಾ ಜಲಾಶಯದ ಹಿನ್ನೀರಿನ ಸೌಂದರ್ಯ ಸವಿಯಲು ಹೊರಗೆ ಕಾಲಿಟ್ಟಿದ್ದಾರೆ.
ತುಂಗಭದ್ರೆಯ ಹಿನ್ನೀರಿನ ಸೌಂದರ್ಯ ಹೊಸಪೇಟೆ ನಗರದ ಗುಂಡಾ ಸಸ್ಯೋದ್ಯಾನ ವನದ ಮುಂಭಾಗ ಸಂಜೆ ವೇಳೆಯಲ್ಲಿ ಸುಂದರ ಸೂರ್ಯಾಸ್ತಮಾನದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ ವೀಕೆಂಡ್ ಖುಷಿ ಅನುಭವಿಸಿದರು.
ಜನರು ಹಿನ್ನೀರಿನೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಕೆಲವರು ಹಿನ್ನೀರಿನಲ್ಲಿ ಆಟ ಆಡಿ ಸಂತಸಪಟ್ಟರು. ಪಾರ್ಕ್‌ಗೆ ಒಂದೇ ದಿನ ಸರಿ ಸುಮಾರು ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದು, ಗುಂಡಾ ಸಸ್ಯೋದ್ಯಾನ ವನದ ಬಳಿಯ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಇದೇ ವೇಳೆ ಜಲಾಶಯ ವೀಕ್ಷಕರೊಬ್ಬರು ಮಾತನಾಡುತ್ತಾ, 'ಸಂಜೆ ವೇಳೆಯಲ್ಲಿ ಜಲಾಶಯದ ಹಿನ್ನೀರನ್ನು ನೋಡಲು ಎರಡು ಕಣ್ಣುಗಳು ಸಾಲವು. ಕುಟುಂಬ ಸಮೇತ ಬಂದು ರಜೆಯನ್ನು ಎಂಜಾಯ್ ಮಾಡುತ್ತಿದ್ದೇವೆ' ಎಂದರು.