ಹೊಸಪೇಟೆ: ಹೊಸಪೇಟೆಯ ವಿಜಯನಗರ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ರಂಗೇರುವ ಲಕ್ಷಣಗಳು ಗೋಚರಿಸುತ್ತಿವೆ. ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬರಬೇಕಾದರೇ ಇನ್ನು ಒಂದು ವರ್ಷ ಕಾಯಬೇಕಾಗಿದೆ. ಅದರೆ, ರಾಜಕೀಯ ವಲಯದಲ್ಲಿ ಚುನಾವಣೆ ನಿಲ್ಲುವ ಕುರಿತು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದು ವಿಧಾನಸಭಾ ಚುನಾವಣೆ ಜಿದ್ದಾಜಿದ್ದಿನಿಂದ ಕೂಡಿರುವುದಕ್ಕೆ ಸಾಕ್ಷಿಯಾಗಿದೆ.
ಒಂದೇ ವೇದಿಕೆಯಲ್ಲಿ ಆನಂದ ಸಿಂಗ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ.. ಕಳೆದ ಸಾರ್ವತ್ರಿ ಕ ಚುನಾವಣೆ ಗೆದ್ದ ಬಳಿಕ ಆನಂದ್ ಸಿಂಗ್ ಇನ್ನು ಮುಂದೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆದರೆ, ಸಕ್ರಿಯ ರಾಜಕಾರಣದಲ್ಲಿ ಇರುವ ಮಾತುಗಳನ್ನು ಆಡಿದ್ದರು.
ಆದರೆ, ಮೊನ್ನೆ ನ್ಯಾಯಾಲಯದ ಆವರಣದ ಕಾರ್ಯಕ್ರಮದಲ್ಲಿ, ಸ್ಪರ್ಧೆ ಮಾಡಲು ಜನರು ಒತ್ತಾಯ ಮಾಡಿದರೆ ಆಲೋಚನೆ ಮಾಡಲಾಗುವುದು ಎಂದು ಹೇಳಿದ್ದಾರೆ. ಅವರು ಮತ್ತೆ ಚುನಾವಣೆ ಸ್ಪರ್ಧೆ ಮಾಡುವ ಸುಳಿವನ್ನು ನೀಡಿದ್ದಾರೆ. ಉಪಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಆನಂದ ಸಿಂಗ್ ಅವರು ವಿಜಯನಗರ ಜಿಲ್ಲೆಯನ್ನಾಗಿ ಮಾಡುವ ಮೂಲಕ ಈಡೇರಿಸಿದ್ದಾರೆ. ಅಲ್ಲದೇ, ಏತ ನೀರಾವರಿಗೆ ಅನುದಾನ ತಂದಿದ್ದಾರೆ. ಇದು ಅವರಿಗೆ ಆನೆ ಬಲ ತಂದಿದೆ ಎಂಬುದು ರಾಜಕೀಯ ವಲಯದ ಪಡಸಾಲೆಯ ಮಾತಾಗಿದೆ.
ಒಂದೇ ವೇದಿಕೆಯಲ್ಲಿ ನಾಯಕರು: ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆನಂದ ಸಿಂಗ್ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ ಕಾಣಿಸಿಕೊಂಡಿದ್ದಾರೆ. ಇದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಈಗಾಗಲೇ ಕಾಂಗ್ರೆಸ್ ಹಿರಿಯ ಮುಖಂಡ ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ಭರತ್ ರೆಡ್ಡಿ ವಿಜಯನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ರಾಜಕೀಯ ವಲಯದಲ್ಲಿ ಸಾಕಷ್ಟು ಗುಮಾನಿ ಇದೆ. ಆದರೆ, ಇಲ್ಲಿವರೆಗೂ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯೆಂದು ಘೋಷಣೆ ಮಾಡಿಲ್ಲ. ಚುನಾವಣೆವರೆಗೂ ಕಾಯುವ ತಂತ್ರಕ್ಕೆ ಮೊರೆ ಹೋಗಿದೆ.
ಸೂರ್ಯನಾರಾಯಣ ರೆಡ್ಡಿ ಲೆಕ್ಕಾಚಾರ ಏನು?:ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಸೂರ್ಯನಾರಾಯಣ ರೆಡ್ಡಿ ಒಬ್ಬರು. ಒಂದು ವರ್ಷದ ಹಿಂದೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದರು. ಅಲ್ಲದೇ, ಯಾವ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಕೆಳ ಮಟ್ಟದಲ್ಲಿ ಪಕ್ಷವನ್ನು ಬಲ ಪಡಿಸುವ ಕೆಲಸವನ್ನು ಮಾಡಿದ್ದರು. ವಿಜಯನಗರ ಮತದಾರರ ಬಗ್ಗೆ ತಿಳಿಯುವುದಕ್ಕೆ ಅಥವಾ ಕಾಂಗ್ರೆಸ್ ಕೊನೆಯ ಸಂದರ್ಭದಲ್ಲಿ ವೆಂಕಟರಾವ್ ಘೋರ್ಪಡೆ ಹೆಸರನ್ನು ಸೂಚಿಸಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಪಕ್ಷದ ಮತಗಳು ಎಷ್ಟಿವೆ ಎಂಬುದು ತಿಳಿಯುತ್ತದೆ. ಬಳಿಕ ಪುತ್ರ ಭರತ್ ರೆಡ್ಡಿ ಕಣಕ್ಕೆ ಇಳಿಸಬಹುದು ಎಂದು ಸೂರ್ಯನಾರಾಯಣ ರೆಡ್ಡಿ ಅವರ ಲೆಕ್ಕಾಚಾರ ಇರುಬಹುದು ಎಂಬುವುದು ರಾಜಕೀಯ ವಿಶ್ಲೇಷಣೆಯಾಗಿದೆ.
ವಿಜಯನಗರ ಕ್ಷೇತ್ರದ ನಂಟು ಬೆಳೆಸಲು ಸಂಬಂಧ: ಆನಂದ ಸಿಂಗ್ ಅವರ ದೊಡ್ಡಪ್ಪನ ಮಗಳು ರಾಣಿ ಸಂಯುಕ್ತಾ. ಭರತ್ ರೆಡ್ಡಿ ಅವರು ಕೆಲ ತಿಂಗಳ ಹಿಂದೆ ರಾಣಿ ಸಂಯುಕ್ತಾ ಅವರ ಪುತ್ರಿಯನ್ನು ವಿವಾಹವಾಗಿದ್ದರು. ವಿಜಯನಗರ ಕ್ಷೇತ್ರದಲ್ಲಿ ರಾಜಕೀಯ ಹಿಡಿತವನ್ನು ಸಾಧಿಸಲು ಸಂಬಂಧ ಬೆಳೆಸಲು ರಾಜಕೀಯ ನಾಯಕರು ಮುಂದಾಗಿದ್ದಾರಾ ಎಂಬುದು ಕ್ಷೇತ್ರದ ಜನರ ಮಾತಾಗಿದೆ.
ಓದಿ: 'ಕೃಷ್ಣದೇವರಾಯರನ್ನು ನಮಗೆ ಹೋಲಿಕೆ ಮಾಡಿ ಅವಮಾನ ಮಾಡುವುದು ಬೇಡ'
ಆನಂದ ಸಿಂಗ್ ಪುತ್ರ ಸಿದ್ಧಾರ್ಥ ಸಿಂಗ್ ರಾಜಕೀಯಕ್ಕೆ ಎಂಟ್ರಿ?: ಸಿದ್ಧಾರ್ಥ ಸಿಂಗ್ ಅವರು ಈಗ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಅಲ್ಲದೇ, ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಜನರಿಗೆ ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಬಿಜೆಪಿಯ ವೇದಿಕೆ ಕಾರ್ಯಕ್ರಮದಲ್ಲಿ ಬಹುತೇಕ ಸಿದ್ದಾರ್ಥ ಸಿಂಗ್ ಕಾಣಿಸಿಕೊಂಡಿಲ್ಲ. ಆನಂದ ಸಿಂಗ್ ಅವರು ವಿಧಾಸಭಾ ಚುನಾವಣೆಗೆ ನಿಲ್ಲುತ್ತಾರೆಯೋ ಅಥವಾ ಪುತ್ರ ಸಿದ್ದಾರ್ಥ ಸಿಂಗ್ ಅವರನ್ನು ಸ್ಪರ್ಧೆ ಮಾಡುತ್ತಾರಾ ಎಂಬುದನ್ನ ಚುನಾವಣೆ ಸಂದರ್ಭದಲ್ಲಿಯೇ ಕಾದು ನೋಡಬೇಕಾಗಿದೆ.