ಕರ್ನಾಟಕ

karnataka

ಹೊಸಪೇಟೆಯಲ್ಲಿ ಗಣಪತಿ ನಿಮಜ್ಜನ ವೇಳೆ ಕ್ರೇನ್ ಪಲ್ಟಿ: ಓರ್ವ ಸಾವು, ಮತ್ತೋರ್ವ ಗಂಭೀರ

By

Published : Sep 11, 2022, 10:39 AM IST

ಗಣಪತಿ ನಿಮಜ್ಜನ ನಡೆಯುತ್ತಿದ್ದಾಗ ಕಾಲುವೆಗೆ ಕ್ರೇನ್ ಪಲ್ಟಿಯಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಹೊಸಪೇಟೆಯಲ್ಲಿ ನಡೆದಿದೆ.

Crane overturns during Ganpati immersion
ಕಾಲುವೆಗೆ ಕ್ರೇನ್ ಪಲ್ಟಿ

ವಿಜಯನಗರ:ಜಿಲ್ಲೆಯ ಹೊಸಪೇಟೆ ಹೊರವಲಯದ ಟಿಬಿ ಡ್ಯಾಂ ಕಾಲುವೆಯಲ್ಲಿ ತಡರಾತ್ರಿ 34 ಅಡಿ ಎತ್ತರದ ಗಣಪತಿ ನಿಮಜ್ಜನ ಸಂದರ್ಭದಲ್ಲಿ ದುರಂತ ನಡೆದಿದೆ. ಕಾಲುವೆಗೆ ಕ್ರೇನ್ ಪಲ್ಟಿಯಾಗಿದ್ದು ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಶೋಕ್ (18) ಮೃತ ವ್ಯಕ್ತಿ. ಸಾಯಿ ನಿಖಿಲ್ (18) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಣೇಶ ಮೂರ್ತಿಸಮೇತ ಕ್ರೇನ್ ಉರುಳಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಒಂದು ಗಂಟೆಗೆ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಕ್ರೇನ್​​ನಿಂದ ಮೃತದೇಹ ಮತ್ತು ಗಾಯಾಳುವನ್ನು ಹೊರತೆಗೆದಿದ್ದಾರೆ.

ಹೊಸಪೇಟೆ ಡಿವೈಎಸ್​ಪಿ ವಿಶ್ವನಾಥ್ ರಾವ್ ಕುಲಕರ್ಣಿ, ಪಿಐಗಳಾದ ಹುಲುಗಪ್ಪ, ಶ್ರೀನಿವಾಸ್ ಮೇಟಿ ಮೊಕ್ಕಾಂ ಹೂಡಿ ಕಾರ್ಯಾಚರಣೆ ನಡೆಸಿದರು. ಮೃತ ಯುವಕ ಮತ್ತು ಗಾಯಾಳು ಟಿಬಿ ಡ್ಯಾಂನ ಇವಿ ಕ್ಯಾಂಪ್ ನಿವಾಸಿಗಳು ಎಂದು ಗುರುತಿಸಲಾಗಿದೆ. ಕಾಲುವೆಗೆ ಬಿದ್ದಿರುವ ಕ್ರೇನ್ ಹೊರ ತೆಗೆಯಲು ಮತ್ತೆರಡು ಕ್ರೇನ್​​ಗಳನ್ನು ತರಿಸಲಾಗಿದೆ.

ಟಿಬಿ ಡ್ಯಾಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕ್ರೇನ್ ಚಾಲಕ ಮತ್ತು ಗಣಪತಿ ಮಹಾಮಂಡಳಿಯವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತಪಟ್ಟ ಅಶೋಕ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಕ್ರೇನ್ ಚಾಲಕ ರಾಜು ಮತ್ತು ಗಣಪತಿ ಮಹಾಮಂಡಳಿಯ ನೂಕರಾಜು ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಾಲಕನ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ಮಡಿಕೇರಿಯಲ್ಲಿ ಅದ್ಧೂರಿ ಗಣೇಶೋತ್ಸವ: ಸ್ತಬ್ಧ ಚಿತ್ರ ಪ್ರದರ್ಶಿಸಿ ವಿಶೇಷ ಆಚರಣೆ

ABOUT THE AUTHOR

...view details