ವಿಜಯನಗರ (ಹೊಸಪೇಟೆ) : ಮಹಿಳೆಯೊಬ್ಬರ ಕತ್ತಿನಿಂದ ಸರ ದೋಚಿ ಪರಾರಿಯಾಗಿದ್ದ ಇಬ್ಬರು ಖದೀಮರನ್ನು 24 ಗಂಟೆಯೊಳಗೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಪೇಟೆ ನಿವಾಸಿಗಳಾದ ಆಟೋ ಚಾಲಕ ಶ್ರೀನಿವಾಸ್ ಮತ್ತು ಆತನ ಸ್ನೇಹಿತ ವೆಂಕೋಬ ಬಂಧಿತ ಆರೋಪಿಗಳು. ಹೊರವಲಯದ ಕೊಂಡಾನಾಯಕನಹಳ್ಳಿ ಮಹಿಳೆ ವರಮಹಾಲಕ್ಷ್ಮಿ ಅವರು ಅ.1ರಂದು ಆಟೋದಲ್ಲಿ ಚರ್ಚ್ ಗೆ ಹೋಗಿದ್ದರು. ಅದೇ ಆಟೋದಲ್ಲಿ ಮರಳಿ ಮನೆಗೆ ಹೋಗುವಾಗ ಆರೋಪಿ ಶ್ರೀನಿವಾಸ್ ಆತನ ಸ್ನೇಹಿತ ವೆಂಕೋಬ ಎಂಬವನನ್ನು ಕರೆಸಿಕೊಂಡಿದ್ದಾನೆ. ಇಬ್ಬರು ಸೇರಿ ಆಟೋದಲ್ಲಿ ಮಹಿಳೆಯನ್ನು ನಗರದ ಹೊರವಲಯದ ಜೋಳದರಾಶಿ ಗುಡ್ಡದ ಬಳಿ ಕರೆದೊಯ್ದು ಸರ ಕಸಿದುಕೊಂಡು ಪರಾರಿಯಾಗಿದ್ದರು.
ಅ.2 ರಂದು ಮಹಿಳೆ, ಹೊಸಪೇಟೆ ಗ್ರಾಮೀಣ ಠಾಣೆ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆಯನ್ನು ಪಿಐ ದೀಪಕ್ ಭೂಸರೆಡ್ಡಿ ನೇತೃತ್ವದಲ್ಲಿ ನಡೆಸಿ, ಪ್ರಕರಣ ದಾಖಲಾದ 24 ತಾಸಿನಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 1.25 ಲಕ್ಷ ಮೌಲ್ಯದ 25 ಗ್ರಾಂ ಚಿನ್ನದ ಸರ ಹಾಗೂ ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಎಸ್ಪಿ ಟಿ. ಮಂಜುನಾಥ ತಳವಾರ ಮಾರ್ಗದರ್ಶನದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪಿಐ ದೀಪಕ್ ಭೂಸರೆಡ್ಡಿ ನೇತೃತ್ವದಲ್ಲಿ ಪಿಎಸ್ಐ ಬಿ. ಶೇಷಾಚಲಂ ನಾಯ್ಡು, ಸಿಬ್ಬಂದಿಗಳಾದ ಮಂಜುನಾಥ ಮೇಟಿ, ವಿ. ರಾಘವೇಂದ್ರ, ಪಂಪಾಪತಿ, ಏಳಂಜಿ ಕೊಟ್ರೇಶ್, ಸಣ್ಣಗಾಳೆಪ್ಪ, ಅಡಿವೆಪ್ಪ, ಮಲ್ಲಿಕಾರ್ಜುನ ವೈದ್ಯಮಠ, ಬಿ. ಚಂದ್ರಪ್ಪ, ನಜೀರ್ ಸಾಹೇಬ್, ಕುಮಾರನಾಯ್ಕ ಪಾಲ್ಗೊಂಡಿದ್ದರು ಎಂದು ಎಸ್ಪಿ ಬಿ. ಎಲ್ ಶ್ರೀಹರಿಬಾಬು ಮಾಹಿತಿ ನೀಡಿದರು.