ಹೊಸಪೇಟೆ: ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದೆ. ಜಲಾಶಯದಿಂದ ಕಾಲುವೆಗಳಿಗೆ ಅವಧಿಗೆ ಸರಿಯಾಗಿ ನೀರು ಹರಿಸಲಾಗಿದ್ದು, ರೈತರಿಗೆ ಸಂತಸ ಉಂಟುಮಾಡಿದೆ.
ಹೊಸಪೇಟೆ: ವರುಣನ ಕೃಪೆಯಿಂದ ಗರಿಗೆದರಿದ ಕೃಷಿ ಚಟುವಟಿಕೆಗಳು ತಾಲೂಕಿನ ಭೌಗೋಳಿಕೆ ಕ್ಷೇತ್ರ 93,400 ಹೆಕ್ಟೇರ್ ಇದೆ. ಅದರಲ್ಲಿ 33,100 ಹೆಕ್ಟೇರ್ ಸಾಗುವಳಿ ಪ್ರದೇಶವಾಗಿದೆ. 8,428 ಹೆಕ್ಟೇರ್ ಮಳೆಯಾಶ್ರಿತ ಹಾಗೂ 24,672 ಹೆಕ್ಟೇರ್ ನೀರಾವರಿ ಪ್ರದೇಶವಾಗಿದೆ. ಉಳಿದ ಭೂಮಿ ತೋಟಗಾರಿಕೆ, ರೇಷ್ಮೆ, ಅರಣ್ಯ, ಉಳುಮೆ ಮಾಡಲು ಅನುಕೂಲವಲ್ಲದ ಭೂಮಿಯಾಗಿದೆ.
ಆಗಸ್ಟ್ ವೇಳೆಗೆ 324 ಎಂ.ಎಂ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 416 ಎಂ.ಎಂ. ಮಳೆಯಾಗಿದ್ದು, ವಾಡಿಕೆಗಿಂತ 82 ಎಂ.ಎಂ. ಹೆಚ್ಚು ಮಳೆಯಾಗಿದೆ. ಹಾಗಾಗಿ ರೈತರ ಬಿತ್ತನೆ ಕಾರ್ಯಕ್ಕೆ ಯಾವುದೇ ತೊಂದರೆ ಆಗಿಲ್ಲ. ಅಲ್ಲದೇ, ಜಲಾಶಯದಿಂದ ಬೇಗನೆ ಕಾಲುವೆಗೆ ನೀರು ಹರಿಸಿದ್ದರಿಂದ ಭತ್ತ ಬೆಳೆಗೆ ಅನುಕೂಲವಾಗಿದೆ. ಈ ಬಾರಿ ಆಗಸ್ಟ್ ಒಂದೇ ತಿಂಗಳಿನಲ್ಲಿ 65 ಎಂ.ಎಂ. ಮಳೆಯಾಗಿದೆ.
ಇದೇ ವೇಳೆಯಲ್ಲಿ ಕಳೆದ ವರ್ಷ 296 ಎಂ.ಎಂ. ವಾಡಿಕೆ ಮಳೆ ಆಗಬೇಕಿತ್ತು. ಆದರೆ, 182 ಎಂ.ಎಂ. ಮಳೆಯಾಗಿದೆ. ಆಗಸ್ಟ್ ಒಂದೇ ತಿಂಗಳಲ್ಲಿ 55 ಎಂ.ಎಂ. ಮಳೆ ಸುರಿದಿತ್ತು. ಅಲ್ಲದೇ, ಕಾಲುವೆಗೆ ಸರಿಯಾದ ಸಂದರ್ಭದಲ್ಲಿ ನೀರು ಹರಿಸದೇ ಭತ್ತದ ಬೆಳೆಗೆ ತೊಂದರೆಯಾಗಿತ್ತು.
ಆಗಸ್ಟ್ ತಿಂಗಳಿನ ಅಂತ್ಯದವರೆಗೂ 23,400 ಹೆಕ್ಟೇರ್ ಬಿತ್ತನೆಯಾಗಿದೆ. ಮಳೆಯಾಶ್ರಿತ 7,865 ಹಾಗೂ ನೀರಾವರಿ 15,535 ಹೆಕ್ಟೇರ್ ಬಿತ್ತನೆಯಾಗಿದೆ. ಆಗಸ್ಟ್ ಒಂದೇ ತಿಂಗಳಿಲ್ಲಿ ಮಳೆಯಾಶ್ರಿತ ಹಾಗೂ ನೀರಾವರಿಯಲ್ಲಿ 10,500 ಹೆಕ್ಟೇರ್ ಬಿತ್ತನೆಯಾಗಿರುವುದು ಮಳೆ ಉತ್ತಮವಾಗಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ, ರೈತರಿಗೆ ಬಿತ್ತನೆಗೆ ಇನ್ನೂ ಒಂದು ವಾರ ಅವಕಾಶವಿದೆ. 5 ರಿಂದ 6 ಸಾವಿರ ಹೆಕ್ಟೇರ್ ಬಿತ್ತನೆಯಾಗಲಿದೆ ಎಂದು ಕೃಷಿ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಕೃಷಿ ಇಲಾಖೆ ಈ ಬಾರಿ 33,000 ಹೆಕ್ಟೇರ್ ಬಿತ್ತನೆ ಗುರಿಯನ್ನು ಹೊಂದಿದೆ. ಭತ್ತ, ಮೆಕ್ಕೆಜೋಳ, ಸೂರ್ಯಕಾಂತಿ, ಜೋಳ, ಸಜ್ಜೆ, ಕಬ್ಬು, ಹತ್ತಿ, ನವಣೆ, ತೊಗರಿ ಬಿತ್ತನೆ ಮಾಡಲಾಗಿದೆ.
ಕೃಷಿ ಇಲಾಖೆಯಲ್ಲಿ ಒಟ್ಟು 2,333 ಕ್ವಿಂಟಲ್ ಬೀಜ ಲಭ್ಯವಿತ್ತು. ಈ ಪೈಕಿ 1,878 ಕ್ವಿಂಟಲ್ ರೈತರಿಗೆ ವಿತರಣೆ ಮಾಡಲಾಗಿದೆ. ಭತ್ತ, ಜೋಳ, ಮೆಕ್ಕೆಜೋಳ, ತೊಗರಿ, ಸಜ್ಜೆ, ನವಣೆ ಬೀಜಗಳನ್ನು ರೈತರಿಗೆ ವಿತರಿಸಲಾಗಿದೆ.
ರಸಗೊಬ್ಬರ ಮಾಹಿತಿ: ಡಿಎಪಿ 1963 ಟನ್ ದಾಸ್ತಾನು, 644 ವಿತರಣೆ. ಎಂಒಪಿ- 1147 ಟನ್ ದಾಸ್ತಾನು, 293 ಟನ್ ವಿತರಣೆ. ಎಸ್ಎಸ್ ಪಿ- 274 ಟನ್ ದಾಸ್ತಾನು, 46 ಟನ್ ವಿತರಣೆ. ಎನ್ ಪಿಕೆ- 3,753 ಟನ್ ದಾಸ್ತಾನು, 863 ಟನ್ ವಿತರಣೆಯಾಗಿದೆ.
ಯೂರಿಯಾ ಸಮಸ್ಯೆ: ರೈತರ ಬೆಳೆಗಳ ಕಾಳು ಕಟ್ಟುವ ಸಂದರ್ಭದಲ್ಲಿ ಯೂರಿಯಾ ಬೇಕಾಗಿತ್ತು. ಆದರೆ, ಕೃಷಿ ಇಲಾಖೆ ಪೂರೈಸುವಲ್ಲಿ ವಿಫಲವಾಗಿದೆ. ಇಲಾಖೆಯಲ್ಲಿ 4,300 ಟನ್ ದಾಸ್ತಾನು ಇತ್ತು. ಆದರೆ, ಇನ್ನು 700 ಟನ್ ನಷ್ಟು ಬೇಡಿಕೆ ಇದ್ದು, ಸಮಸ್ಯೆ ಉಂಟಾಗಿದೆ.