ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ವಿಜಯನಗರ: ಎರಡು ಆಟೋ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ 8 ಜನರು ಸಾವನ್ನಪ್ಪಿರುವ ಘಟನೆ ಹೊಸಪೇಟೆ ತಾಲೂಕಿನ ವಡ್ಡರಹಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಇಂದು ನಡೆದಿದೆ. ಮೃತರನ್ನು ಯಾಸ್ಮೀನ್ (45), ಸಲೀಮಾ (40), ಉಮೇಶ್ (27), ಜಹೀರ್ (16), ಸಪ್ರಾಬಿ (55), ಕೌಸರ್ ಬಾನು (35), ಇಬ್ರಾಹಿಂ (33) ಹಾಗೂ ಸಹಿರಾ (25) ಎಂದು ಗುರುತಿಸಲಾಗಿದೆ. 7 ಮಂದಿ ಸ್ಥಳದಲ್ಲೇ ಮೃತರಾಗಿದ್ದು, ಸಹಿರಾ (25) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತರಲ್ಲಿ ಉಮೇಶ್ (27) ಬಳ್ಳಾರಿಯ ಬಂಡಿಹಟ್ಟಿಯವರಾಗಿದ್ದು, ಉಳಿದವರೆಲ್ಲರೂ ಬಳ್ಳಾರಿ ನಗರದ ಕೌಲ್ಬಜಾರ್ನವರಾಗಿದ್ದಾರೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಹೊಸಪೇಟೆ ಗ್ರಾಮೀಣ ಠಾಣೆ ಪೊಲೀಸರು ಸೇರಿದಂತೆ ಸ್ಥಳೀಯರು ಕಂದಕದಲ್ಲಿ ಬಿದ್ದ ಎರಡು ಆಟೋಗಳನ್ನು ಮೇಲೆತ್ತಿ ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
"ಮೇಲ್ನೋಟಕ್ಕೆ ಲಾರಿ ಚಾಲಕನ ತಪ್ಪೆಂದು ಗೊತ್ತಾಗಿದೆ. ಘಟನೆ ಸಂಬಂಧ ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದೆ. ಮೃತರು ತುಂಗಭದ್ರಾ ಅಣೆಕಟ್ಟೆ ನೋಡಲೆಂದು ಬಳ್ಳಾರಿಯಿಂದ ಹೊಸಪೇಟೆಗೆ ಆಗಮಿಸಿದ್ದರು. ಈ ವೇಳೆ ಘಟನೆ ನಡೆದಿದೆ" ಎಂದು ಡಿಎಸ್ಪಿ ವಿಶ್ವನಾಥ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.
ಗಾಯಗೊಂಡ 12 ಜನರ ಪೈಕಿ ಗಂಭೀರವಾಗಿರುವ ನಾಲ್ವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇವರಲ್ಲಿ ಸಹಿರಾ ಎಂಬುವರು ಮೃತರಾಗಿದ್ದಾರೆ. ಇನ್ನುಳಿದವರಿಗೆ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಶಾಸಕ ಗವಿಯಪ್ಪ ಸೇರಿದಂತೆ ಬಳ್ಳಾರಿ ವಲಯದ ಐಜಿಪಿ ಲೋಕೇಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದ್ದಾರೆ.
ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮಾತನಾಡಿ," ಬಕ್ರೀದ್ ಮುಗಿಸಿಕೊಂಡು ಒಂದೇ ಕುಟುಂಬದ 10 ಮಂದಿ ಹೊಸಪೇಟೆಯ ತುಂಗಭದ್ರಾ ಡ್ಯಾಂ ನೋಡಲು ಹೋಗುತ್ತಿದ್ದರು. ಈ ವೇಳೆ ಆಟೋಗೆ ಲಾರಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಗೊಂಡವರನ್ನು ಹೊಸಪೇಟೆ ಹಾಗೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವಂತೆ ವಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಜಿಲ್ಲಾಡಳಿತ ಮೂಕಲ ಸೂಚನೆ ನೀಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ. ಮೃತರ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ., ಗಾಯಾಳುಗಳಿಗೆ 50 ಸಾವಿರ ರೂ. ಪರಿಹಾರವನ್ನು ನೀಡಲಾಗುತ್ತದೆ" ಎಂದರು.
ಘಟನೆ ಕುರಿತು ಹೊಸಪೇಟೆ ಕಾಂಗ್ರೆಸ್ ಮುಖಂಡ ಇಮಾಮ್ ನಿಯಾಜಿ ಮಾತನಾಡಿ, "ಇದೊಂದು ದುರಂತ ಘಟನೆ. ನಿನ್ನೆ ಬಕ್ರೀದ್ ಮುಗಿಸಿಕೊಂಡು ಕುಟುಂಬಸಮೇತ ಎರಡು ಆಟೋಗಳೊಂದಿಗೆ ತುಂಗಭದ್ರಾ ಡ್ಯಾಂ ವೀಕ್ಷಿಸಲು ಇವರು ಪ್ರಯಾಣ ಮಾಡುತ್ತಿದ್ದರು. ಟ್ರಕ್ಗೆ ಆಟೋ ಡಿಕ್ಕಿಯಾದ ಪರಿಣಾಮ ಅಪಘಾತವಾಗಿದೆ" ಎಂದರು.
ಇದನ್ನೂ ಓದಿ:ಮಂಗಳೂರಿನಲ್ಲಿ ಡಿವೈಡರ್ಗೆ ಸ್ಕೂಟರ್ ಡಿಕ್ಕಿ.. ಅಪ್ರಾಪ್ತರಿಬ್ಬರ ದಾರುಣ ಸಾವು