ಬಳ್ಳಾರಿ: ಜಿಲ್ಲೆಯಲ್ಲಿ ಐವರು ಹೆಚ್‍ಐವಿ ಸೋಂಕಿತರು ಕೊರೊನಾ ಸೋಂಕನ್ನೇ ಮಣಿಸಿದ್ದಾರೆ. ಇದೊಂದು ರೀತಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿಗೆ ವ್ಯತಿರಿಕ್ತವಾದ ಆಶಾದಾಯಕ ಬೆಳವಣಿಗೆಯಾಗಿದೆ.
ಕೋವಿಡ್-19 ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಐವರು ಹೆಚ್‍ಐವಿ ಸೋಂಕಿತರು, ವೈದ್ಯರ ಸತತ ಪರಿಶ್ರಮದಿಂದ ಗುಣಮುಖರಾಗಿ ಇತ್ತೀಚೆಗೆ ಮನೆಗೆ ತೆರಳಿದ್ದಾರೆ. ಇನ್ನೋರ್ವನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನಲ್ಲಿಯೂ ಕೊರೊನಾ ಸೋಂಕಿನ ಅಂಶ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ಚಿಕಿತ್ಸೆ ನೀಡುವ ವೈದ್ಯರಿಗೆ ಆತ್ಮವಿಶ್ವಾಸ ಹೆಚ್ಚಿಸಿದೆ.
ಐವರು ಹೆಚ್‍ಐವಿ ಸೋಂಕಿತರು ಜಿಲ್ಲೆಯ ವಿವಿಧ ತಾಲೂಕಿನವರಾಗಿದ್ದು, ಕೊರೊನಾ ಸೋಂಕು ಕಾಣಿಸಿಕೊಂಡ ಕೂಡಲೇ ಅವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದಕ್ಕೆ ಆರಂಭಿಸಲಾಯಿತು. ಮೊದಲಿಗೆ ಅವರಲ್ಲಿದ್ದ ಭಯವನ್ನು ನಿವಾರಣೆ ಮಾಡಲಾಯಿತು. ಬಳಿಕ ಹಂತ-ಹಂತವಾಗಿ ಅವರಲ್ಲಿ ಆತ್ಮಸ್ಥೈರ್ಯ ತುಂಬುತ್ತಾ ಕೊರೊನಾ ಎಂಬುದು ಹೆಚ್‍ಐವಿಗಿಂತಲೂ ವಾಸಿಯಾಗುವ ಸೋಂಕು ಎಂಬುದನ್ನು ಮನಗಾಣಿಸಿ ಅವರಲ್ಲಿ ಮನೋಸ್ಥೈರ್ಯ ತುಂಬಲಾಯಿತು. ಅವರ ಮೇಲೆ ನಿರಂತರ ನಿಗಾ ಇಡಲಾಗಿತ್ತು.
ಪ್ರಮುಖವಾಗಿ ಅಗತ್ಯ ಚಿಕಿತ್ಸೆ ನೀಡಿ ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸಾ ವಿಧಾನ ಅನುಸರಿಸಲಾಯಿತು. ಬಹುಮುಖ್ಯವಾಗಿ ಅವರಲ್ಲಿ ಭಯ ಹೋಗಲಾಡಿಸಿದ್ದರಿಂದ ಕೊರೊನಾ ಸೋಂಕಿನಿಂದ ಹೆಚ್‍ಐವಿ ಸೋಂಕಿತರು ಗುಣಮುಖರಾದರು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.
ವಯೋವೃದ್ಧರು, ತೀವ್ರ ಬಾಧಿತ ರೋಗಿಗಳಲ್ಲಿ ಕೊರೊನಾ ಕಾಣಿಸಿಕೊಂಡರೆ ಗುಣಮುಖವಾಗೋದು ಅತಿ ವಿರಳ ಎಂಬ ಮಾತಿಗೆ ಈ ಐವರು ಹೆಚ್‍ಐವಿ ಸೋಂಕಿತರು ಗುಣಮುಖವಾಗಿರೋದು ಅಚ್ಚರಿ ಮೂಡಿಸಿದೆ. ಈವರೆಗೂ ಕೊರೊನಾದಿಂದ ಜಿಲ್ಲೆಯಲ್ಲಿ ಮೃತಪಟ್ಟ 50 ಜನರ ಪೈಕಿ ಹೆಚ್ಚಿನವರು ವಯೋವೃದ್ಧರು ಹಾಗೂ ತೀವ್ರತರದ ರೋಗಗಳಿಂದ ಬಳಲುವವರಾಗಿದ್ದರು. ಅವರೆಲ್ಲರ ಪೈಕಿ ಈ ಹೆಚ್‍ಐವಿ ಸೋಂಕಿತರು ಕೊರೊನಾ ಮಣಿಸಿರುವುದು, ಉಳಿದ ಕೊರೊನಾ ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡುವುದಕ್ಕೆ ಕಾರಣವಾಗಿದೆ.
ಗುಣಮುಖರ ಸಂಖ್ಯೆ ಏರಿಕೆ:ಲಾಕ್‍ಡೌನ್ ರಿಲೀಫ್ ಬಳಿಕ ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅದಾದ ಬಳಿಕ ಜಿಂದಾಲ್ ಕಾರ್ಖಾನೆ ನೌಕರರನೋರ್ವನಿಗೆ ಸೋಂಕು ಕಾಣಿಸಿಕೊಂಡ ಬಳಿಕ ತೀವ್ರಗತಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ.
ದಿನಕ್ಕೆ 60-70 ಹೊಸ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆ ಹಾಟ್ ಸ್ಪಾಟ್ ಜಿಲ್ಲೆಯಾಗಿ ಗುರುತಿಸಿಕೊಂಡಿದೆ. ಅಲ್ಲದೇ ಮತ್ತೊಮ್ಮೆ ಜಿಲ್ಲೆಯನ್ನು ಸಂಪೂರ್ಣ ಲಾಕ್‍ಡೌನ್ ಮಾಡಬೇಕೆಂಬ ಒತ್ತಾಯಗಳು ಕೇಳಿ ಬಂದಿವೆ. ಇದೆಲ್ಲದರ ಮಧ್ಯೆಯೂ 1890 ಸೋಂಕಿತರ ಪೈಕಿ ಗುಣಮುಖರಾಗಿ 1055 ಮಂದಿ ಮನೆಗೆ ತೆರಳಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ವೈದ್ಯರ ಸತತ ಪರಿಶ್ರಮದಿಂದ ಐವರು ಹೆಚ್‍ಐವಿ ಸೋಂಕಿತರು ಕೊರೊನಾದಿಂದ ಗುಣಮುಖರಾಗಿ ಜುಲೈ 8ರಂದು ಮನೆ ಸೇರಿದ್ದಾರೆ. ಇದಕ್ಕೆಲ್ಲ ಕಾರಣ ನಮ್ಮ ವೈದ್ಯ ತಂಡದ ಪರಿಶ್ರಮ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಶ್ಲಾಘಿಸಿದ್ದಾರೆ.