ಹೊಸಪೇಟೆ(ವಿಜಯನಗರ) : ನಮ್ಮ ಪುರಾತನ ಸಂಸ್ಕೃತಿ, ಶ್ರೀಮಂತ ಪರಂಪರೆ ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸಲು ವೈಭವದಿಂದ ಮೆರೆದಿದ್ದ ವಿಜಯನಗರ ಸಾಮ್ರಾಜ್ಯ, ಶ್ರೀಕೃಷ್ಣದೇವರಾಯ ಹಾಗೂ ಅವರ ಆಡಳಿತದ ಶೈಲಿಯು ಪಠ್ಯಕ್ರಮದ ಭಾಗವಾಗಬೇಕು. ಶ್ರೀಕೃಷ್ಣದೇವರಾಯ ಮತ್ತು ವಿಜಯನಗರ ಸಾಮ್ರಾಜ್ಯದ ಬಗ್ಗೆ ಇತಿಹಾಸಕಾರರು ಹೆಚ್ಚಿನ ಒತ್ತು ನೀಡಬೇಕು ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರು ಹೇಳಿದರು.
ಹಂಪಿಯ ವಿಶ್ವ ಪಾರಂಪರಿಕ ಸ್ಮಾರಕಗಳನ್ನು ವೀಕ್ಷಿಸಿದ ಬಳಿಕ ಅವರು ವಿಜಯ ವಿಠ್ಠಲ ಮಂದಿರ ಆವರಣದಲ್ಲಿರುವ ಕಲ್ಲಿನ ರಥದ ಎದುರು ಅವರು ಮಾತನಾಡಿದರು. ಶ್ರೀಕೃಷ್ಣದೇವರಾಯ ಕೇವಲ ಓರ್ವ ರಾಜನಾಗಿರದೆ, ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಳ್ಳುತ್ತಿದ್ದ.
ಸಂಸ್ಕೃತಿ, ಸಂಗೀತ, ಶಿಕ್ಷಣ ಮತ್ತು ಉತ್ತಮ ಆಡಳಿತಕ್ಕೆ ಕೃಷ್ಣದೇವರಾಯ ಒತ್ತು ನೀಡಿದ್ದ. ದೇಶದ ಯುವಪೀಳಿಗೆಯು ಐತಿಹಾಸಿಕ ಹಂಪಿಗೆ ಭೇಟಿ ನೀಡಬೇಕು. ಗತವೈಭವದಿಂದ ಮೆರೆದ ನಮ್ಮ ಶ್ರೀಮಂತ ಸಾಮ್ರಾಜ್ಯ ಮತ್ತು ಸುಂದರ ವಾಸ್ತುಶಿಲ್ಪ ಶೈಲಿಯ ಬಗ್ಗೆ ಹೆಮ್ಮೆ ಪಡುವ ಮತ್ತು ತಿಳಿದುಕೊಳ್ಳಬೇಕು ಎಂದರು.