ವಿಜಯನಗರ: ಜಿಲ್ಲೆಯಾದ್ಯಂತ ಇಂದು ಉತ್ತಮ ಮಳೆಯಾಗಿದ್ದು, ಅದರಲ್ಲೂ ಹೊಸಪೇಟೆ ಮತ್ತು ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಮರಗಿಡಗಳು, ವಿದ್ಯುತ್ ಕಂಬಗಳು ಉರುಳಿವೆ. ಜನಜೀವನ ಅಸ್ತವ್ಯಸ್ತವಾಗಿದೆ.
ರಸ್ತೆಗಳಲ್ಲೂ ನೀರು ನಿಂತಿದ್ದು, ಮನೆಗಳಿಗೂ ನೀರು ನುಗ್ಗಿದೆ. ನಗರದಲ್ಲಿ ಗಗನದೆತ್ತರದ ಮಹಲ್ಗಳು ಅವೈಜ್ಞಾನಿಕವಾಗಿ ನಿರ್ಮಾಣವಾಗಿದ್ದು, ವ್ಯವಸ್ಥಿತ ಚರಂಡಿ, ಪಾರ್ಕಿಂಗ್ ನಿರ್ಮಾಣ ಮಾಡದೇ ರಸ್ತೆಗಳಲ್ಲೇ ನೀರು ನಿಲ್ಲುವಂತಾಗಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆ ಅಸಮರ್ಪಕ ಯೋಜನೆ ರೂಪಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಲ್ಲುವಂತಾಗಿದೆ. ಹಾಗಾಗಿ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಮನೆ ಮಂದಿಯೆಲ್ಲಾ ನೀರು ಹೊರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅತ್ತ ಮನೆ ಮಂದಿಯೆಲ್ಲಾ ನೀರು ಹೊರಹಾಕುತ್ತಿದ್ದರೆ, ಇತ್ತ ತಹಶೀಲ್ದಾರ್ ವಿಶ್ವಜಿತ್ ಮೆಹತಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಿಟಿ ರೌಂಡ್ ಹಾಕಿ ಪರಿಶೀಲನೆ ನಡೆಸಿತು. ನಗರದಲ್ಲಿ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿದ್ದರಿಂದ ಕೂಡಲೇ ಕಾರ್ಯಾಚರಣೆ ನಡೆಸಲು ತಹಶೀಲ್ದಾರ್ ಸೂಚಿಸಿದರು.