ಬಳ್ಳಾರಿ: ಜಿಲ್ಲಾದ್ಯಂತ ಕಳೆದ ರಾತ್ರಿ ಮತ್ತು ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಹೊಸ ಮೋಕ, ಚಾಗನೂರು ಗ್ರಾಮಗಳ ಮನೆಗಳು ನೀರಿನಲ್ಲಿ ಜಲಾವೃತವಾಗಿವೆ. ಮನೆಯಲ್ಲಿನ ಸಾಮಗ್ರಿಗಳೆಲ್ಲ ನೀರುಪಾಲಾಗಿದ್ದು, ಮನೆಯೊಳಗಿನ ನೀರು ಹೊರಹಾಕಲು ಗ್ರಾಮಸ್ಥರು ಹರಸಾಹಸ ಪಟ್ಟಿದ್ದಾರೆ.
ಮೋಕ ಗ್ರಾಮದಲ್ಲಿರುವ 110 ಕೆವಿ ವಿದ್ಯುತ್ ವಿತರಣಾ ಕೇಂದ್ರ ಜಲಾವೃತವಾಗಿದ್ದು, ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಮಳೆಯ ನೀರು ವಿದ್ಯುತ್ ಕೇಂದ್ರಕ್ಕೆ ನುಗ್ಗಿದೆ. ಇದರಿಂದ ಸುಮಾರು 4 ಅಡಿಯಷ್ಟು ನೀರು ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿಂತಿದ್ದು, ಹೈವೊಲ್ಟೇಜ್ ಟ್ರಾನ್ಸ್ ಫಾರ್ಮರ್‌ಗಳು ನೀರಿನಲ್ಲಿ ಮುಳುಗಿವೆ. ಪರಿಣಾಮ ವಿದ್ಯುತ್ ವಿತರಣೆ ಸ್ಥಗಿತಗೊಳಿಸಲಾಗಿದೆ.
ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಮಳೆ ಹಾನಿ ಪೀಡಿತ ಸ್ಥಳಗಳಿಗೆ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಮಳೆಯಿಂದಾಗಿ ಮನೆಗಳ ಗೋಡೆಗಳು ಬಿರುಕುಬಿಟ್ಟಿವೆ. ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಕೊಚ್ಚಿಹೋಗಿದೆ. ಬೆಳೆ ಕಳೆದುಕೊಂಡವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.