ಬಳ್ಳಾರಿ: ಕಳೆದ 3-4 ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ರೇಣುಕಾನಗರ ಸೇರಿದಂತೆ ಇನ್ನಿತರೆ ಕಾಲೋನಿಯ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಏಕಾಏಕಿ ಮಳೆ ನೀರು ಮನೆಗಳಿಗೆ ನುಗ್ಗಿರುವ ಪರಿಣಾಮ ಮನೆಯೊಳಗಿನ ವಸ್ತುಗಳು ಒದ್ದೆಯಾಗಿ ಚೆಲ್ಲಾಪಿಲ್ಲಿಯಾಗಿವೆ. ಈ ಕುರಿತು ಮಹಾನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರನ್ನು ಭೇಟಿಯಾದ ರೇಣುಕಾನಗರ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಂಡಿದ್ದಾರೆ.
ಆದ್ರೆ ಆಯುಕ್ತೆ ತುಷಾರಮಣಿ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ನಿಮ್ಮ ಮನೆಗಳು ಇರುವ ಪ್ರದೇಶ ಬುಡಾದಿಂದ ಅನುಮತಿ ಪಡೆದು ನಿರ್ಮಾಣಗೊಂಡ ಬಡಾವಣೆಗಳ ಪೈಕಿ ಒಂದರಲ್ಲಿ ಇರಬೇಕು. ಮನೆ ಕಂದಾಯ, ನೀರಿನ ಕಂದಾಯ ಕಟ್ಟಿರಬೇಕು. ಹಾಗಿದ್ದರೆ ಮಾತ್ರ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಖುದ್ದು ಆಯುಕ್ತೆ ತುಷಾರಮಣಿ ಅವರೇ ಆ ನಿವಾಸಿಗಳಿಗೆ ಹೇಳಿ ಕಳಿಸಿದ್ದಾರಂತೆ.
ಎಲ್ಲೆಂದರಲ್ಲಿ ನುಗ್ಗಿದ ಮಳೆ ನೀರು ರೇಣುಕಾನಗರದ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿ ಸೃಷ್ಟಿಯಾದ ಸಮಸ್ಯೆ ಕುರಿತ ಫೋಟೋ, ದೂರುದಾರರ ಹೆಸರು, ದೂರವಾಣಿ ಸಂಖ್ಯೆಯನ್ನು ಆಯುಕ್ತೆ ಮತ್ತು ಪರಿಸರ ಇಲಾಖೆಯವರ ವಾಟ್ಸಪ್ಗೆ ಕಳಿಸಿಕೊಡಲಾಗಿತ್ತು. ಅದರ ಜೊತೆಗೆ ಕಳೆದ ಎರಡು ದಿನಗಳ ಹಿಂದೆಯೇ ಕೆಲ ನಿವಾಸಿಗಳು ದೂರು ಸಲ್ಲಿಸಿದ್ದಾರೆ. ದೂರುದಾರರ ಪೈಕಿ 70 ವರ್ಷದ ಆಸುಪಾಸಿನ ನಿವೃತ್ತ ಪ್ರಾಚಾರ್ಯ ಹನುಮಂತ ರೆಡ್ಡಿ ದಂಪತಿಯೂ ಸೇರಿದ್ದಾರೆ ಎಂದು ಆಯುಕ್ತೆ ತುಷಾರಮಣಿ ಅವರಿಗೆ ತಿಳಿಸಿದ್ರೂ ಕೂಡ ಡೋಂಟ್ ಕೇರ್ ಎಂದಿದ್ದಾರೆ ಎನ್ನಲಾಗಿದೆ.
ನಾನು ಈ ಭಾಗದ ಜನರ ಸಮಸ್ಯೆ ಪರಿಹರಿಸಲು ಜನರನ್ನು ನಿಯೋಜಿಸಬೇಕು. ಹೀಗೆ ನಿಯೋಜಿಸುವ ಜನರಿಗೆ ವೇತನ ನೀಡಬೇಕು. ವೇತನ ನೀಡಲು ಹಣ ಬೇಕು. ಜನ ತೆರಿಗೆ ಕಟ್ಟದೇ ಇದ್ದರೆ ಅನಧಿಕೃತ ಬಡಾವಣೆಯವರಾಗಿದ್ದರೆ ನಾನು ಅವರಿಗೆ ಸೇವೆ ಕೊಡಲಾಗದು ಎಂದು ಒಂದೇ ಸಮನೆ ಆಯುಕ್ತೆ ಮಾತನಾಡಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.