ವಿಜಯನಗರ: ಜಿಲ್ಲಾದ್ಯಂತ ಸತತ ನಾಲ್ಕನೇ ದಿನವೂ ಮಳೆ ಮುಂದುವರೆದಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮಳೆಯಿಂದ ಕೆರೆಗೆ ಕೋಡಿ ಬಿದ್ದರೆ, ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡು ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತವು ಶಾಲೆಗಳಿಗೆ ರಜೆ ಘೋಷಿಸಿದೆ.
ಇಂದು ಸಹ ನಸುಕಿನ ಜಾವ 5 ಗಂಟೆಗೆ ಆರಂಭಗೊಂಡ ಮಳೆ ಬೆಳಗ್ಗೆ 9 ಗಂಟೆಯವರೆಗೆ ಎಡೆಬಿಡದೇ ಸುರಿಯಿತು. ಭಾರಿ ಮಳೆಗೆ ತಾಲೂಕಿನ ನಾಗಲಾಪುರ ಗ್ರಾಮಕ್ಕೆ ಭಾರಿ ಹಳ್ಳ ಬಂದಿದೆ. ಬ್ಯಾಲಕುಂದಿ - ಗರಗ ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಮರಿಯಮ್ಮನ ಹಳ್ಳಿ, ಗುಂಡಾ ತಾಂಡಾ ಭಾಗದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ವಿಶ್ವವಿಖ್ಯಾತ ಹಂಪಿಯ ಹಜಾರಾಮರ ದೇವಾಲಯ ಜಲಾವೃತವಾಗಿದೆ.
ಮಳೆಗೆ ರಸ್ತೆ ಸಂಪರ್ಕ ಬಂದ್: ಹರಪನಹಳ್ಳಿ ತಾಲೂಕಿನ ಸಿಂಗ್ರಿಹಳ್ಳಿ ಗ್ರಾಮದ ಕೆರೆಗೆ ಕೋಡಿ ಬಿದ್ದು, ಅಪಾರ ಪ್ರಮಾಣದ ನೀರು ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಸರ್ಕಾರಿ ಶಾಲೆ ಜಲಾವೃತಗೊಂಡಿದೆ. ನಾಗತಿಕಟ್ಟೆ - ಗೌಳೇರಹಟ್ಟಿ, ಬೇವಿನಹಳ್ಳಿ - ಉಚ್ಚಂಗಿದುರ್ಗ, ಉಚ್ಚಂಗಿದುರ್ಗ-ಅರಸೀಕೆರೆ ರಸ್ತೆ ಸಂಪರ್ಕ ಕಡಿತಗೊಂಡಿದೆ.