ಬಳ್ಳಾರಿ:ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರಿ ಪ್ರಮಾಣದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೂಡ್ಲಿಗಿಯಲ್ಲಿ ಭಾರಿ ಪ್ರಮಾಣದ ಮಳೆ.. ಜನಜೀವನ ಸಂಪೂರ್ಣ ಅಸ್ತವ್ಯಸ್ತ.. - ಮಳೆ
ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕೂಡ್ಲಿಗಿಯ ಪಟ್ಟಣದಲ್ಲಿ ನಿನ್ನೆ ಗುಡುಗು ಸಹಿತ ಭಾರಿ ಮಳೆಯಾದ ಕಾರಣ ಪಟ್ಟಣದ ಅಕ್ಕಪಕ್ಕದ ಹಳ್ಳ-ಕೊಳ್ಳಗಳು ತುಂಬಿ ಹರಿದು ಅನೇಕ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಮೂರು ಮನೆಗಳು ಜಖಂಗೊಂಡಿವೆ. ಮಳೆಗೆ ಗ್ರಾಮದ ಗೌಡ್ರು ಭೋಜರಾಜ ಎಂಬುವರ ಮನೆಯ ಬಳಿಯ ತೆಂಗಿನ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಇದರಿಂದಾಗಿ ಮೂರು ಕಂಬಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಹೊಸಹಳ್ಳಿ ರಸ್ತೆಯ ಪಕ್ಕದ ಮನೆಗಳಿಗೆ ನುಗ್ಗಿದ ನೀರು:
ಉಜ್ಜನಿಯ ಹಳ್ಳ ತುಂಬಿ ಹರಿದಿದ್ದರಿಂದ ಹೊಸಹಳ್ಳಿ ರಸ್ತೆಯ ಪಕ್ಕದಲ್ಲಿನ ಸುಮಾರು 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೊಟ್ಟೂರು ರಸ್ತೆಯ ಬಳಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿನ 20ಕ್ಕೂ ಅಧಿಕ ಮನೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ಕೂಡ್ಲಿಗಿ–ಕೊಟ್ಟೂರು ನಡುವೆ ಮಲ್ಲನಾಯಕನಹಳ್ಳಿ ಬಳಿ ಹಳ್ಳ ತುಂಬಿ ಹರಿದು ಸುಮಾರು ಒಂದು ತಾಸು ಸಂಚಾರ ಸ್ಥಗಿತಗೊಂಡಿತ್ತು. ತಾಲೂಕಿನ ಮೊರಬ ಗ್ರಾಮ ಹೊರವಲಯದಲ್ಲಿ ಕೆಸರು ಗದ್ದೆಯಂತಾಗಿದ್ದು, ರಸ್ತೆಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಿಲುಕಿ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು.