ಬಳ್ಳಾರಿ:ಊಹಾಪೋಹಗಳಿಗೆ ಕಿವಿಗೊಟ್ಟು ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಕಾರ್ಮಿಕರ ಬಳಿಗೆ ತೆರಳಿ ಲಸಿಕೆ ಹಾಕಿಸುವ ಮೂಲಕ ಜಿಲ್ಲೆಯ ಸಂಡೂರು ತಾಲೂಕು ಆರೋಗ್ಯ ಇಲಾಖೆ ವಿಶೇಷ ಪ್ರಯತ್ನ ಮಾಡಿದೆ.
ತಾಲೂಕಿನ ಕುರೇಕುಪ್ಪ ಗ್ರಾಮದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 50 ಮಂದಿ ಕಾರ್ಮಿಕರಿಗೆ ಲಸಿಕೆ ಹಾಕಲಾಗಿದೆ. ಕುರೇಕುಪ್ಪ ಗ್ರಾಮದ ವಾರ್ಡ್ ನಂಬರ್ 1ರ ತೋಟದಲ್ಲಿ ಕೃಷಿ ಕೆಲಸ ಮಾಡಿಕೊಂಡು ಸುಮಾರು 50 ಜನ ಅಲ್ಲೇ ವಾಸವಿದ್ದರು. ಇವರು ನಿಗದಿತ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದರು. ಹಾಗಾಗಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕುಶಾಲ್ ರಾಜ್ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸಿದ್ದರು.
ಜಾಗೃತಿಯ ಪರಿಣಾಮ, ಜನರು ಲಸಿಕೆ ಹಾಕಿಸಿಕೊಳ್ಳಲು ಒಪ್ಪಿದ್ದರು. ಹಾಗಾಗಿ, ತೋಟದ ಮನೆಯಲ್ಲೇ ತಾತ್ಕಾಲಿಕ ಲಸಿಕಾ ಕೇಂದ್ರ ಸ್ಥಾಪಿಸಿ 50 ಮಂದಿಗೆ ಲಸಿಕೆ ನೀಡುವ ಕಾರ್ಯ ಮಾಡಲಾಗಿದೆ. ಆರೋಗ್ಯ ಸಿಬ್ಬಂದಿಯ ವಿಶೇಷ ಪ್ರಯತ್ನ ಈ ಮೂಲಕ ಫಲ ಕಂಡಿದೆ.