ಬಳ್ಳಾರಿ:ಸಹಸ್ರ ಸಂಖ್ಯೆಯ ಹಿಂದೂಗಳ ಮಧ್ಯದಲ್ಲೇ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿಸೋ ವ್ಯಕ್ತಿ ಈ ಓವೈಸಿ ಯಾರ್ರೀ? ಆತ ಏನು ಪಾಕಿಸ್ತಾನದ ಪ್ರತಿನಿಧಿಯೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಸಹಸ್ರ ಸಂಖ್ಯೆಯುಳ್ಳ ಹಿಂದೂಗಳ ರಾಷ್ಟ್ರ ಭಾರತ. ನಮ್ಮ ದೇಶದಲ್ಲೇ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿಸೋದಕ್ಕೆ ಆತನಿಗೆ ಎಷ್ಟು ಧೈರ್ಯ. ಇಷ್ಟಕ್ಕೂ ಆ ಓವೈಸಿ ಯಾರು? ಆತ ಪಾರ್ಲಿಮೆಂಟ್ ಮೆಂಬರಾ ಅಥವಾ ಪಾಕಿಸ್ತಾನದ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನಾ ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ರು.
ಒವೈಸಿಯನ್ನು ಪೋಷಣೆ ಮಾಡುತ್ತಿರೋದು ಕಾಂಗ್ರೆಸ್. ಹಾಗಾಗಿ, ನಿಮಗೇನಾದ್ರೂ ಪಾಕಿಸ್ತಾನಕ್ಕೆ ಹೋಗಲು ಇಷ್ಟವಿದ್ದರೆ ಹೋಗಿಬಿಡಿ. ಸುಮ್ಮನೆ ಒವೈಸಿಯಂತಹ ವ್ಯಕ್ತಿಯನ್ನು ಬಿಟ್ಟು ಈ ದೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿಸಿದರೆ ಹುಷಾರ್. ನಮ್ಮದು ಶಾಂತಿಯ ದೇಶ. ಇಲ್ಲಿ ಎಲ್ಲಾ ಧರ್ಮೀಯರನ್ನ ಗೌರವಿಸುವಂತಹ ಸಂಸ್ಕೃತಿ ಇದೆ. ಆ ಅನ್ಯೋನ್ಯತೆಯನ್ನು ಹಾಗೆಯೇ ಇರಲು ಬಿಡಿ. ಅದನ್ನ ಕೆರಳಿಸಿದ್ರೆ ಸರಿ ಇರಲ್ಲ ಎಂದು ಎಚ್ಚರಿಸಿದರು.
ಪಾಕಿಸ್ತಾನ್ ಜಿಂದಾಬಾದ್ ಹೇಳಿಕೆ ಹೆಚ್ಚಾಗುತ್ತಿರೋದಕ್ಕೆ ಕಾಂಗ್ರೆಸ್ ಕಾರಣ. ಸದನದಲ್ಲಿ ಇಂತವರ ಪರ ವಕಾಲತ್ತು ವಹಿಸುವ ಕಾಂಗ್ರೆಸ್ ಹಾಗೂ ಇತರ ಪಕ್ಷಗಳೇ ಇದಕ್ಕೆ ಹೊಣೆ ಎಂದರು.
ನಾವು ಭಾರತೀಯರು ಒಂದೇ ತಾಯಿ ಮಕ್ಕಳಿದ್ದಂತೆ. ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಓವೈಸಿಯನ್ನ ದೊಡ್ಡ ಮನುಷ್ಯ ಅಂದುಕೊಂಡಿದ್ದಾರೆ. ನಿಮಗೆ ಪಾಕ್ ಬಗ್ಗೆ ಅಷ್ಟೊಂದು ಅಭಿಮಾನ ಇದ್ದರೆ ಅಲ್ಲಿಗೆ ಹೋಗಿ. ಅಲ್ಲಿ ನಿಮ್ಮನ್ನ ಯಾರೂ ಕ್ಯಾರೆ ಅನ್ನಲ್ಲ. ಇದನ್ನ ಜಾಸ್ತಿ ಆಗೋಕೆ ಬಿಡಲ್ಲ. ನಮ್ಮ ಸರ್ಕಾರ ಇದನ್ನ ಮುಂದುವರೆಯಲು ಬಿಡಲ್ಲ ಎಂದು ಕಿಡಿಕಾರಿದರು.