ಬಳ್ಳಾರಿ:ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ತಿಂಗಳಿಗೆ ಒಮ್ಮೆಯಾದ್ರೂ ವಾಸ್ತವ್ಯ ಹೂಡಲು ಚಿಂತನೆ ನಡೆಸಿರುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಜಿಲ್ಲೆಯ ಅವಂಬಾವಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮೊದ್ಲು ರಾಜಧಾನಿ ಬೆಂಗಳೂರಿನಿಂದಲೇ ಈ ವಾಸ್ತವ್ಯ ಶುರು ಮಾಡಲಿದ್ದೇನೆ. ಸರ್ಕಾರಿ ಸೌಲಭ್ಯಗಳು ಸಕಾಲದಲ್ಲಿ ದೊರೆಯುತ್ತವೆ ಎಂಬುದರ ಕುರಿತು ರಿಯಾಲಿಟಿ ಚೆಕ್ಗೆ ಇದು ಸಹಕಾರಿಯಾಗಲಿದೆ ಎಂದರು.
ರಾಜ್ಯವ್ಯಾಪಿ ತಿಂಗಳಿಗೊಮ್ಮೆ ಪ್ರವಾಸ ಕೈಗೊಂಡಾಗ ಸರ್ಕಾರಿ ಅತಿಥಿ ಗೃಹದಲ್ಲಿರುವ ಬದಲು ಆಸ್ಪತ್ರೆಯಲ್ಲಿ ವಾಸ್ತವ್ಯ ಮಾಡುವೆ ಎಂದಿದ್ದಾರೆ. ಅಲ್ಲದೇ ಹಂಪಿ ಉತ್ಸವ ಆಚರಣೆ ಕುರಿತು ಸಿಎಂ ಬಿಎಸ್ವೈ ಜೊತೆ ಚರ್ಚಿಸುವೆ. ಶೀಘ್ರದಲ್ಲೇ ಅಧಿಕಾರಿಗಳು, ಶಾಸಕರ ಸಭೆ ಕರೆದು ದಿನಾಂಕ ನಿಗದಿ ಮಾಡಲಾಗುವುದು. ಮೈಸೂರು ದಸರಾದಂತೆ ನಿರ್ದಿಷ್ಟ ದಿನಾಂಕ ನಿಗದಿಪಡಿಸುವೆ ಎಂದರು.
ವೈದ್ಯರಿಗೆ ಖಡಕ್ ವಾರ್ನಿಂಗ್:
ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಗಡುವು ನೀಡುವೆ, 15 ದಿನಗಳ ಕಾಲಮಿತಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಬೇಕು. ಆಸ್ಪತ್ರೆ ಸೇವೆಗಳನ್ನು ನೀಡುವ ವಿಚಾರದಲ್ಲಿ ತಾಂತ್ರಿಕ ತೊಂದರೆ ನೆಪ ಹೇಳಬಾರದು. ಸೇವೆ ಒದಗಿಸುವಲ್ಲಿ ಏನೇ ಲೋಪ ಇದ್ದರೂ ಅದನ್ನು ಸರಿಪಡಿಸುವ ಜವಾಬ್ದಾರಿ ಸಂಬಂಧಿಸಿದವರದ್ದೇ ಆಗಿದೆ. ಕಲ್ಬುರ್ಗಿ ಡಯಾಲಿಸಿಸ್ ಘಟಕದಲ್ಲಿ ಸಾವಿನ ಪ್ರಕರಣದ ಕುರಿತು ಈಗಾಗಲೇ ನಾನು ವರದಿ ಕೇಳಿರುವೆ. ಒಂದು ವೇಳೆ ಡಿಹೆಚ್ಓ-ಡಿಎಸ್ ಕರ್ತವ್ಯ ಲೋಪ ಕಂಡು ಬಂದರೆ ತಕ್ಷಣ ಕ್ರಮ ಕೈಗೊಳ್ಳುವೆ. ಬಳ್ಳಾರಿಯ ವಿಮ್ಸ್ ಸಮಸ್ಯೆ ಬಗೆಹರಿಸುವೆ. ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಶೀಘ್ರ ಕಾರ್ಯಾರಂಭ ಮಾಡಲಿದೆ. ಇದಕ್ಕೆ ನಾನು ಬದ್ಧನಾಗಿರುವೆ ಎಂದಿದ್ದಾರೆ.