ಬಳ್ಳಾರಿ:ಕೊರೊನಾ ಸೋಂಕಿತ ಮಹಿಳೆ ಗುಣಮುಖರಾದ ಹಿನ್ನೆಲೆ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಬುಧವಾರ ಸಂಜೆ ಅವರನ್ನು ಬಿಡುಗಡೆ ಮಾಡಲಾಯಿತು. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಬಿಡುಗಡೆಯಾದವರ ಸಂಖ್ಯೆ 9ಕ್ಕೇರಿದ್ದು, ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 5ಕ್ಕೆ ಇಳಿದಿದೆ.
ಜಿಲ್ಲೆಯಲ್ಲಿ ಇದುವರೆಗೆ 14 ಜನ ಸೋಂಕಿತರಿದ್ದರು. ಈ ಮೊದಲು ಗುಣಮುಖರಾದ ರೋಗಿ-89, ರೋಗಿ-91, ರೋಗಿ-141, ರೋಗಿ-90 ಮತ್ತು ರೋಗಿ-15, 21 ವರ್ಷ ವಯಸ್ಸಿನ ರೋಗಿ-333 ಮತ್ತು 24 ವರ್ಷದ ರೋಗಿ- 337 ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಗುಣಮುಖರಾದ ಹೊಸಪೇಟೆಯ ರೋಗಿ-336 ಅವರನ್ನು ಮೂರು ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದರು. ಮತ್ತೋರ್ವ ಹೊಸಪೇಟೆಯ ರೋಗಿ-332 ಇಂದು ಗುಣಮುಖರಾಗಿ ಮನೆ ಕಡೆಗೆ ಹೆಜ್ಜೆ ಹಾಕಿದರು.
ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾದ ಇನ್ನೋರ್ವ ಮಹಿಳೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಅವರು ಗುಣಮುಖರಾಗಿ ಮನೆಯತ್ತ ತೆರಳಲು ಸಿದ್ಧರಾಗಿ ನಿಂತಿದ್ದ ಹಿರಿಯ ವಯಸ್ಸಿನ ಮಹಿಳೆ ರೋಗಿ-332 ಅವರಿಗೆ ಹೂಗುಚ್ಛ, ಹಣ್ಣು-ಹಂಪಲು ನೀಡಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ನಂತರ ಅವರಿಗೆ ಪಡಿತರ ಕಿಟ್ ಕಳುಹಿಸಿಕೊಡಲಾಯಿತು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಎನ್.ಬಸರೆಡ್ಡಿ ಅವರು ಮಾತನಾಡಿ, ಇವರ ಬಗ್ಗೆಯೇ ಸಾಕಷ್ಟು ಚಿಂತಿತರಾಗಿದ್ದೆವು. ಅದಕ್ಕೆ ಅವರ ವಯಸ್ಸು ಕೂಡ ಕಾರಣವಾಗಿತ್ತು. ಈ ಮಹಿಳೆಯ ವಯಸ್ಸು 72 ಆಗಿರೋದ್ರಿಂದ ವಿಶೇಷ ಕಾಳಜಿವಹಿಸಿ ಚಿಕಿತ್ಸೆ ನೀಡಲಾಗಿತ್ತು. ಅವರು ಗುಣಮುಖರಾಗಿ ಬಿಡುಗಡೆಯಾಗುತ್ತಿರೋದು ಸಂತಸ ತಂದಿದೆ ಎಂದರು.
ಗುಣಮುಖರಾಗಿ ಹೊರಬಂದ ಮಹಿಳೆ ರೋಗಿ- 332 ಅವರು ಮಾತನಾಡಿ, ಆಸ್ಪತ್ರೆಗೆ ದಾಖಲಾಗಿ ಬಂದಾಗಿನಿಂದ ಇಲ್ಲಿವರೆಗೆ ಚೆನ್ನಾಗಿ ನೋಡಿಕೊಂಡರು. ಸಮರ್ಪಕ ಚಿಕಿತ್ಸೆ ಕೊಟ್ಟರು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಋಣವನ್ನು ನಾವೆಂದು ಮರೆಯುವುದಿಲ್ಲ ಎಂದರು.