ಬಳ್ಳಾರಿ: ಮಾನ್ಯತಾ ಪತ್ರ ಹೊಂದಿರುವ ಪತ್ರಕರ್ತರ ಕುಟುಂಬ ಸದಸ್ಯರಿಗೆ ಅಗತ್ಯ ವೈದ್ಯಕೀಯ ತಪಾಸಣೆ, ಇನ್ನಿತರೆ ಅವಘಡ ಸಂಭವಿಸಿದ ವೇಳೆ ಅಗತ್ಯ ಸೌಲಭ್ಯ ಕಲ್ಪಿಸುವ ಸಲುವಾಗಿಯೇ ರಾಜ್ಯ ಸರ್ಕಾರ ರಾಜೀವ್ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಿದೆ. ಗಣಿನಾಡು ಬಳ್ಳಾರಿಯಿಂದಲೇ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ತಿಳಿಸಿದ್ದಾರೆ.
ಬಳ್ಳಾರಿಯ ಪತ್ರಿಕಾ ಭವನದಲ್ಲಿಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರಿಸುಮಾರು ನಲವತ್ತೈದು ಮಂದಿ ಪತ್ರಕರ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಡುವ ಮಾನ್ಯತಾ ಪತ್ರವನ್ನು ಹೊಂದಿದ್ದಾರೆ. ಮುಂದಿನ ಹದಿನೈದು ದಿನದೊಳಗೆ ಎಲ್ಲ ಮಾನ್ಯತಾ ಪತ್ರ ಪಡೆದ ಪತ್ರಕರ್ತರು ಹಾಗೂ ಅವಲಂಬಿತರಿಗೆ ಸೂಕ್ತ ವೈದ್ಯಕೀಯ ತಪಾಸಣಾ ಶಿಬಿರ ನಡೆಸಲು ಬೆಂಗಳೂರಿನ ಕೇಂದ್ರ ಕಚೇರಿ ನಿರ್ಧರಿಸಿದೆ. ಬೆಂಗಳೂರಿನಿಂದ ನುರಿತ ತಜ್ಞ ವೈದ್ಯರು ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ, ಅಂದಾಜು 5 ಲಕ್ಷದವರೆಗೂ ವೈದ್ಯಕೀಯ ಸೌಲಭ್ಯ ಪಡೆಯುವ ರಾಜೀವ್ ಆರೋಗ್ಯ ಯೋಜನೆಯ ಕಾರ್ಡ್ ವಿತರಿಸಲಾಗುವುದು ಎಂದರು. ಈ ಯೋಜನೆಯನ್ನು ಮೊಟ್ಟ ಮೊದಲ ಬಾರಿಗೆ ಬಳ್ಳಾರಿಯಲ್ಲೇ ಆಯೋಜಿಸುವ ಗುರಿಯನ್ನು ಹೊಂದಲಾಗಿದೆ. ಮಾನ್ಯತಾ ಪತ್ರ ಪಡೆದ ಎಲ್ಲ ಪತ್ರಕರ್ತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.