ಹೊಸಪೇಟೆ:ಕಳೆದ ಕೆಲದಿನಗಳ ಹಿಂದೆ ಐತಿಹಾಸಿಕ ಹಂಪಿಯ ನದಿಪಾತ್ರದ ಮಂಟಪಗಳು ಮುಳುಗಡೆಯಾಗಿದ್ದವು. ಇದೀಗ ಚಕ್ರತೀರ್ಥ ಕೋದಂಡರಾಮ ದೇವಸ್ಥಾನದ ಪಾದಗಟ್ಟೆ ಜಲಾವೃತಗೊಂಡಿದೆ.
ಹಂಪಿ ಕೋದಂಡರಾಮ ದೇವಸ್ಥಾನದ ಪಾದಗಟ್ಟೆ ಜಲಾವೃತ
ಐತಿಹಾಸಿಕ ಹಂಪಿಯ ನದಿ ಪಾತ್ರದ ಮಂಟಪಗಳು ಮುಳುಗಡೆಯಾಗಿದ್ದು, ಇದೀಗ ಇಲ್ಲಿನ ಕೋದಂಡರಾಮ ದೇವಸ್ಥಾನದ ಪಾದಗಟ್ಟೆಯೂ ಜಲಾವೃತವಾಗಿದೆ.
ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ಕಾಲುದಾರಿ ಈಗಾಗಲೇ ನೀರಿನಲ್ಲಿ ಮುಳುಗಿ ಹೋಗಿದೆ. ಅಲ್ಲದೇ, ಯಂತ್ರೋದ್ಧಾರಕ ಆಂಜನೇಯನ ಮಂದಿರಕ್ಕೆ ನದಿ ಮೂಲಕ ಹೋಗುವ ಕಾಲುದಾರಿ ನೀರಿನಿಂದ ಆವೃತವಾಗಿದೆ. ದೇವಸ್ಥಾನಗಳಿಗೆ ಭಕ್ತರು ತೆರಳಬೇಕಾದರೆ ಪಕ್ಕದಲ್ಲೇ ಇರುವ ಬಸವಣ್ಣ ಬಳಿ ಮೆಟ್ಟಿಲಿಂದ ಮಾತಂಗ ಪರ್ವತದ ಮೂಲಕ ತೆರಳಬೇಕಾಗಿದೆ.
ಜನಿವಾರ ಮಂಟಪ, ಪುರಂದರ ಮಂಟಪಗಳು ಕರ್ಮಾಧಿ ಮಂಟಪಗಳು ಈಗಾಗಲೇ ಸಂಪೂರ್ಣ ಜಲಾವೃತವಾಗಿವೆ. ಸ್ನಾನಗಟ್ಟವೂ ನೀರಿನ ಮುಳುಗಿದೆ. ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ತೆರಳುವ ಮುನ್ನ ಭಕ್ತರು ನದಿ ಮೆಟ್ಟಿಲಿನಲ್ಲಿ ಕುಳಿತುಕೊಂಡು ಸ್ನಾನ ಮಾಡುತ್ತಿದ್ದಾರೆ. ಸ್ಥಳೀಯ ಪೊಲೀಸರು ಭಕ್ತರಿಗೆ ಜಾಗೃತರಾಗಿ ಸ್ನಾನ ಮಾಡಬೇಕು ಹಾಗೂ ಗುಂಪು ಗೂಡಬಾರದು ಎಂದು ಎಚ್ಚರಿಸುತ್ತಿದ್ದಾರೆ.