ಹೊಸಪೇಟೆ:ಹಂಪಿ ಉತ್ಸವಕ್ಕೆ ಕೊನೆಗೂ ಕಾಲ ಕೂಡಿ ಬಂದಿದ್ದು, ಎರಡು ದಿನ ನಡೆಯುವ ಹಂಪಿ ಉತ್ಸವಕ್ಕೆ ಈಗಾಗಲೇ ಸಕಲ ಸಿದ್ಧತೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಉತ್ಸವದ ಅಂಗವಾಗಿ ಇಂದು ವಿಜಯನಗರ ವಸಂತ ವೈಭವ ಜರುಗಿತು.
ವಿಜಯನಗರ ವಸಂತ ವೈಭವದಲ್ಲಿ ಪ್ರದರ್ಶನ ನೀಡಿದ ಕಲಾ ತಂಡಗಳು
ಹಂಪಿ ಉತ್ಸದವ ಅಂಗವಾಗಿ ಹೊಸಪೇಟೆಯ ನಗರದಲ್ಲಿ ವಿಜಯನಗರ ವಸಂತ ವೈಭವ ಕಾರ್ಯಕ್ರಮ ಜರುಗಿತು. ಡಿಸಿಎಂ ಲಕ್ಷ್ಮಣ್ ಸವದಿ ಅವರು ಕಲಾತಂಡಗಳ ಮೆರವಣಿಗೆಗೆ ಚಾಲನೆ ನೀಡಿದರು. ಸಂಸದ ದೇವೇಂದ್ರಪ್ಪ ಕಲಾತಂಡಗಳ ಜೊತೆ ಹೆಜ್ಜೆ ಹಾಕಿದರು. ವಸಂತ ವೈಭವದಲ್ಲಿ ಬರೋಬ್ಬರಿ 110 ಕಲಾ ತಂಡಗಳು ಭಾಗವಹಿಸಿ ಮೆರವಣಿಗೆ ಯುದ್ದಕ್ಕೂ ತಮ್ಮ ಕಲೆಯನ್ನು ಪ್ರದರ್ಶಿಸಿದರು.
ಕನ್ನಡ ನಾಡಿನ ಕಂಪು ಸೂಸುವ ಇಂಪಾದ ವಾದ್ಯಗಳಿಂದ ವಿಜಯ ನಗರ ಗತ ವೈಭವ ಸವಿ ನೆನಪುಗಳನ್ನು ನೆನಪಿಸುತ್ತಾ ಕಲಾವಿದರು ಮೆರವಣಿಗೆಯಲ್ಲಿ ಹೆಜ್ಜೆ ಹಾಕುತ್ತಾ ಸಾಗಿದರು. ಗ್ರಾಮೀಣ ಸೊಬಗಿನ ಕಲಾವಿದರು ರಂಗು- ರಂಗಿನ ಉಡುಗೆಗಳನ್ನು ಧರಿಸಿ ಐತಿಹಾಸಿಕ ಹಂಪಿ ಉತ್ಸವಕ್ಕೆ ಮೆರಗು ತಂದರು. ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ, ನಂದಿಕೋಲು, ಬಂಜಾರ ನೃತ್ಯ ಸೇರಿದಂತೆ ವಿವಿಧ ಕಲೆಗಳ ಪ್ರದರ್ಶನ ನೀಡಿದರು.
ಐತಿಹಾಸಿಕ ಹಂಪಿ ಉತ್ಸವಕ್ಕೆ ಸಕಲ ಸಿದ್ಧತೆ:
ಎರಡು ದಿನಗಳ ಕಾಲ ನಡೆಯುವ ಐತಿಹಾಸಿಕ ಹಂಪಿ ಉತ್ಸವಕ್ಕೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಹಾಗೂ ಅಗತ್ಯ ಸಹಕಾರ ನೀಡಲು ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಮತ್ತು ಜೆಸ್ಕಾಂ ಇಲಾಖೆ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದೆ.
ಹಂಪಿ ಶ್ರೀಕೃಷ್ಣ ದೇವರಾಯ ವೇದಿಕೆ, ಸಾಸಿವೆ ಕಾಳು ಗಣೇಶ ವೇದಿಕೆ, ಬಸವಣ್ಣ ವೇದಿಕೆ ಹಾಗೂ ಗಜ ಶಾಲೆಯ ಮಂಟಪದಲ್ಲಿ ಹಾಕಿರುವ ಧ್ವನಿ ಬೆಳಕು ವೇದಿಕೆಗಳು ಪ್ರದರ್ಶನಕ್ಕೆ ಸಿದ್ಧಗೊಂಡಿದೆ. ಈ ವೇದಿಕೆಗಳು ವಿದ್ಯುತ್ ದ್ವೀಪಗಳಿಂದ ಕಂಗೋಳಿಸುತ್ತಿವೆ.