ಹೊಸಪೇಟೆ : ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಹಂಪಿ ಬೈ ನೈಟ್ ಕಾರ್ಯಕ್ರಮವನ್ನು ಪುನಾರಂಭಿಸಲು ಹಂಪಿ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಐತಿಹಾಸಿಕ ಸ್ಮಾರಕಗಳು ಬೆಳಕಿನ ಚಿತ್ತಾರದಿಂದ ಕಂಗೊಳಿಸಲು ತಯಾರಾಗಿವೆ.
ಹಂಪಿಯ ವಿರೂಪಾಕ್ಷೇಶ್ವರ ದೇವಾಲಯ, ಸಾಸಿವೆಕಾಳು ಗಣಪ, ವಿಜಯವಿಠ್ಠಲ ದೇವಸ್ಥಾನ, ಕಮಲ ಮಹಲ್, ಆನೆ ಸಾಲು ಮಂಟಪ, ಮಾತಂಗ ಪರ್ವತ, ಕೋದಂಡರಾಮ ದೇವಸ್ಥಾನ, ಉಗ್ರ ನರಸಿಂಹ ಸೇರಿದಂತೆ ಇನ್ನಿತರ ಸ್ಮಾರಕಗಳಲ್ಲಿ ಬೆಳಕಿನ ಚಿತ್ತಾರ ಮೂಡಲಿದೆ.
ಕೊರೊನಾದಿಂದ ಬೈ ನೈಟ್ ಸ್ಥಗಿತ : ಹಂಪಿ ಉತ್ಸವ ಸಂದರ್ಭದಲ್ಲಿ ಹಂಪಿ ಬೈ ನೈಟ್ ಆಯೋಜಿಸಲಾಗುತ್ತಿತ್ತು. ಇದು ಹಂಪಿ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತಿತ್ತು. ಇದನ್ನು ಗಮನಿಸಿದ ಹಂಪಿ ಅಭಿವೃದ್ದಿ ಪ್ರಾಧಿಕಾರ 10 ಕೋಟಿ ರೂ. ವೆಚ್ಚದಲ್ಲಿ ಪ್ರತಿದಿನ ಹಂಪಿ ಬೈ ನೈಟ್ ಯೋಜನೆ ರೂಪಿಸಿತ್ತು. ಅದರಂತೆ, ಕಳೆದ ವರ್ಷವೇ ಹಂಪಿ ಬೈ ನೈಟ್ ಆರಂಭವಾಗಬೇಕಿತ್ತು. ಆದರೆ, ಕೋವಿಡ್ ಕಾರಣದಿಂದ ಅದು ಸಾಧ್ಯವಾಗಿರಲಿಲ್ಲ.
ಹಂಪೆಯ ಐತಿಹಾಸಿಕ ಸ್ಮಾರಕಗಳಿಗೆ ಬೆಳಕಿನ ಚಿತ್ತಾರ ಜೆಸ್ಕಾಂನಿಂದ ಒಪ್ಪಿಗೆ ಬೇಕು : ಹಂಪಿ ಬೈ ನೈಟ್ಗೆ ಈಗಾಗಲೇ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಜೆಸ್ಕಾಂ ಸರ್ವೆ ನಡೆಯುತ್ತಿದ್ದು, ಅದು ಪೂರ್ಣಗೊಂಡು ವರದಿ ಬಂದ ಬಳಿಕ ಬೈ ನೈಟ್ ಪ್ರಾರಂಭವಾಗಲಿದೆ. ಇದರ ಉಸ್ತುವಾರಿಯನ್ನು ಕೃಷ್ಣ ಕುಮಾರ್ ಎಂಬವರು ವಹಿಸಿಕೊಂಡಿದ್ದಾರೆ.
ನೋಡಿ : ಕಡಲು ಸೇರಿದ ಅಳಿವಿನಂಚಿನ 200 'ಆಲಿವ್ ರೆಡ್ಲಿ' ಕಡಲಾಮೆ ಮರಿಗಳು.. ವಿಡಿಯೋ
ಈ ಕುರಿತು 'ಈಟಿವಿ ಭಾರತ'ನೊಂದಿಗೆ ವಿಶ್ವಪರಂಪರೆ ಹಂಪಿ ಅಭಿವೃದ್ಧಿ ನಿರ್ವಹಣಾ ಪ್ರಾಧಿಕಾರದ ಪ್ರಭಾರ ಆಯುಕ್ತ ಸಿದ್ಧರಾಮೇಶ್ವರ ಅವರು ಮಾತನಾಡಿ, ಹಂಪಿ ಪ್ರವಾಸಿಗರನ್ನು ಸೆಳೆಯುವ ಅತ್ಯಾಕರ್ಷಕ ತಾಣವಾಗಿದೆ. ಹಾಗಾಗಿ, ಹಂಪಿ ಬೈ ನೈಟ್ ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಸಿದ್ಧತೆ ಪೂರ್ಣಗೊಂಡಿದ್ದು, ಕೆಲ ಕಾರ್ಯಗಳು ಬಾಕಿ ಇವೆ. ಏಪ್ರಿಲ್ ತಿಂಗಳಿನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಇದರ ಜೊತೆಗೆ ರೈಲು ಮಾದರಿಯ ಹಂಪಿ ಇನ್ ವ್ಹೀಲ್ ಗೆ ಶೀಘ್ರವೇ ಚಾಲನೆ ಸಿಗಲಿದೆ ಎಂದು ಹೇಳಿದರು.