ಬಳ್ಳಾರಿ:ಹೈದರಾಬಾದ್ ಕರ್ನಾಟಕದ ಗ್ರಾಮೀಣ ಭಾಗದ ಜನರ ಮೆಚ್ಚುಗೆಯ ಹಬ್ಬವಾದ ಸಣ್ಣಗೌರಿ ಹಬ್ಬವನ್ನು ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಗಣಿನಾಡಿನಲ್ಲಿ ಸಣ್ಣಗೌರಿ ಹಬ್ಬದ ಸಂಭ್ರಮ: ಸಕ್ಕರೆ ಆರತಿ ಬೆಳಗಿದ ಬಾಲಕಿಯರು, ಮಹಿಳೆಯರು..! ಜಿಲ್ಲೆಯ ಸಿರುಗುಪ್ಪ, ಬಳ್ಳಾರಿ, ಕುರುಗೋಡು, ಕಂಪ್ಲಿ, ಹೊಸಪೇಟೆ, ಕೂಡ್ಲಿಗಿ, ಸಂಡೂರು, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನ ಹಡಗಲಿ ಮತ್ತು ಹರಪನಹಳ್ಳಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಗೌರಿಹುಣ್ಣಿಮೆ ಹಬ್ಬದ ವಾತಾವರಣ ಕಳೆಗಟ್ಟಿತ್ತು.
ಜಿಲ್ಲೆಯ ವಿವಿಧ ಗ್ರಾಮಗಳ ಆರಾಧ್ಯ ದೇಗುಲಗಳಲ್ಲಿ ಸಣ್ಣಗೌರಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ದೂರದ ಊರಿಗೆ ಮದುವೆ ಮಾಡಿಕೊಟ್ಟ ಮನೆಮಗಳು ತವರು ಮನೆಗೆ ಬಂದು ಸಕ್ಕರೆ ಆರತಿ ಬೆಳಗುವುದು ಈ ಹಬ್ಬದ ಪ್ರತೀತಿ. ಮಗಳಷ್ಟೇ ಅಲ್ಲ, ಮೊಮ್ಮಗಳೂ ಕೂಡ ಹೊಸ ಬಟ್ಟೆ ಧರಿಸಿಕೊಂಡೇ ಸಕ್ಕರೆ ಆರತಿ ಬೆಳಗಿ ಭಕ್ತಿ ಮೆರೆಯಬೇಕು. ಅನಂತರ ಮನೆ ಮಂದಿಯೊಂದಿಗೆ ಕುಳಿತುಕೊಂಡು ಸಹಭೋಜನ ಸವಿಯುವುದು ಇಲ್ಲಿನ ವಾಡಿಕೆ.
ಇದೇ ವೇಳೆ ತವರು ಮನೆಯವರು ತಮ್ಮ ಮಗಳ ಮೂಲಕ ನಮ್ಮನೆಗೆ ಮುಂದಿನ ವರ್ಷಕ್ಕೆ ಪುಟ್ಟಗೌರಿ ಹುಟ್ಟಿ ಬರಲೆಂದು ಹರಕೆ ಹೊರುತ್ತಾರೆ. ಜೊತೆಗೆ ಮೊಮ್ಮಗಳಿಗೆ ವಿದ್ಯಾಬುದ್ಧಿ ನೀಡುವಂತೆ ಗೌರಿಮೂರ್ತಿಗೆ ಸಕ್ಕರೆ ಆರತಿ ಹೊತ್ತ ಕಳಸವನ್ನು ಬೆಳಗಿ ವಿಶೇಷ ಪೂಜೆ ಸಲ್ಲಿಸುತ್ತಾರೆ.