ಬಳ್ಳಾರಿ:ಮೂರನೇ ಹಂತದ ಲಾಕ್ಡೌನ್ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಮಹಾನಗರ ಹಾಗೂ ಪಟ್ಟಣ ಪ್ರದೇಶಗಳಿಂದ ತಮ್ಮೂರಿನತ್ತ ವಾಪಸ್ ಆದ ಪದವೀಧರ ಉದ್ಯೋಗಿಗಳು ಜಿಲ್ಲಾ ಪಂಚಾಯಿತಿ ನರೇಗಾ ಕೂಲಿಯ ಮೊರೆ ಹೋಗಿದ್ದಾರೆ.
ಮಹಾಮಾರಿ ಕೊರೊನಾ ಸೋಂಕಿನಿಂದಾಗಿ ದೇಶವ್ಯಾಪಿ ಲಾಕ್ಡೌನ್ ಆಗಿದ್ದರಿಂದ ಖಾಸಗಿ ಕಂಪನಿಗಳು ಸೇರಿದಂತೆ ಉದ್ಯೋಗದಾತ ಕಂಪನಿಗಳು ಹಾಗೂ ಕಾರ್ಖಾನೆಗಳು ಬಾಗಿಲು ಹಾಕಿವೆ. ಆ ಕಾರಣಕ್ಕಾಗಿ ಕೆಲಸಗಳಿಲ್ಲದೇ ತಮ್ಮೂರಿನತ್ತ ಪ್ರಯಾಣ ಬೆಳೆಸಿ ಮನೆಯಲ್ಲೇ ಕಾಲ ಕಳೆಯದೇ ನರೇಗಾ ಕೂಲಿ ಅರಸಿ ಹೋಗುತ್ತಿದ್ದಾರೆ.
ನರೇಗಾ ಕೂಲಿಯ ಮೊರೆ ಹೋದ ಪದವೀಧರರು ಅದೆಷ್ಟೋ ಯುವ ಪದವೀಧರರು ನರೇಗಾ ಯೋಜನೆಯ ಅಡಿಯಲ್ಲಿ ಬರುವ ನಾನಾ ಕಾಮಗಾರಿಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ಲಾಕ್ಡೌನ್ ದಿನಗಳನ್ನ ಕಳೆಯುತ್ತಿದ್ದಾರೆ. ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ ಎಂಜಿನಿಯರಿಂಗ್ ಪದವೀಧರರು, ಎಸ್ಎಸ್ಎಲ್ಸಿ, ಐಟಿಐ, ಡಿಪ್ಲೋಮಾ ಸೇರಿದಂತೆ ವಿವಿಧ ವಿಷಯಗಳಲ್ಲಿ ಪದವಿ ಪಡೆದವರು ಸದ್ಯ ದಾಳಿಂಬೆ ಕ್ರಾಪ್ ಕಟಿಂಗ್ಸ್‌ಗೆ ತೆರಳುತ್ತಿದ್ದಾರೆ.
ಪ್ರತಿದಿನಕ್ಕೆ 500 ರೂ. ಕೂಲಿ:
ಹಂಪಾಪಟ್ಟಣ ಗ್ರಾಮದಿಂದ ಜಿಲ್ಲೆಯ ಕುರುಗೋಡು, ಅಂಕಸಮುದ್ರ, ಹಂಪಸಾಗರ, ತಂಬ್ರಳ್ಳಿ, ಮರಬ್ಬಿಹಾಳ್, ಉಪನಾಯಕನಹಳ್ಳಿ, ಬಾಚಿಗೊಂಡನಹಳ್ಳಿ, ಕಡಲಬಾಳು, ಬಸರಕೋಡು, ಹಡಗಲಿ ತಾಲೂಕಿನ ಮೈಲಾರ, ಕೊಪ್ಪಳ ಜಿಲ್ಲೆಯ ಕುಷ್ಟಗಿಗೆ ತೆರಳುವ 15ರಿಂದ 20 ಜನರ ತಂಡದಲ್ಲಿ ಐಟಿಐ, ಎಸ್ಎಸ್ಎಲ್ಸಿ, ಡಿಪ್ಲೋಮಾ ಹೀಗೆ ನಾನಾ ವಿಷಯಗಳ ಪದವೀಧರರೂ ಇದ್ದಾರೆ.
ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕೆಲಸ ಮಾಡಿದರೆ 500 ರೂ. ಅಥವಾ ಬೆಳಿಗ್ಗೆ 6ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೆಲಸ ಮಾಡಿದರೆ 300 ರೂ. ಕೂಲಿ ದೊರೆಯುತ್ತದೆ. ಹೀಗೆ ಕೆಲಸವಿಲ್ಲವೆಂದು ಸುಮ್ಮನೇ ಕೂರದೆ ಕುಟುಂಬ ನಿರ್ವಹಣೆಗೆ ಸಾಥ್ ನೀಡುತ್ತಿದ್ದಾರೆ.
ಬಹುತೇಕ ಪದವೀಧರರಿಗೆ ನೆರವಾದ ನರೇಗಾ:
ಈ ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ಪದವೀಧರರಿಗೆ ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರ ಜತೆಗೆ ನರೇಗಾ ಕೂಲಿ ನೆರವಾಗಿದೆ. ಹಂಪಾಪಟ್ಟಣ, ಮಗಿಮಾವಿನಹಳ್ಳಿ ಕೆರೆಗಳಲ್ಲಿ ನರೇಗಾದಡಿ ನೀಡಲಾಗುವ ಕೂಲಿ ಕೆಲಸಕ್ಕೆ ಪದವೀಧರರೂ ಹೋಗುತ್ತಿದ್ದಾರೆ. ದಿನಕ್ಕೆ 275 ರೂ. ಕೂಲಿ ದೊರೆಯುತ್ತದೆ.