ಬಳ್ಳಾರಿ: ಗಣಿ ಜಿಲ್ಲೆಯಲ್ಲಿ ಅಂದಾಜು 2,031 ಸರ್ಕಾರಿ ಶಾಲಾ ಕಟ್ಟಡಗಳಿಗೆ ದೊಡ್ಡ ಪ್ರಮಾಣದ ದುರಸ್ತಿ ಕಾರ್ಯ ಆಗಬೇಕಿದೆ. ಸುಮಾರು 1,020 ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ.
ಜಿಲ್ಲೆಯಲ್ಲಿ ಬರೋಬ್ಬರಿ 2,031 ಸರ್ಕಾರಿ ಶಾಲಾ ಕಟ್ಟಡಗಳು ಹೆಚ್ಚಿನ ದುರಸ್ತಿ ಕಾಣಬೇಕಿದೆ. ಅಲ್ಲದೇ, 948 ಶಾಲಾ ಕಟ್ಟಡಗಳು ಸಣ್ಣಪುಟ್ಟ ರಿಪೇರಿಯ ಸಮಸ್ಯೆಯನ್ನು ಎದುರಿಸುತ್ತಿವೆ.
1,020 ಶಾಲಾ ಕಟ್ಟಡಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದ ಸಂದರ್ಭದಲ್ಲಿ ಈ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲಾರದಂತಹ ಸ್ಥಿತಿಗೆ ಇಲ್ಲಿನ ಶಾಲಾ ಕಟ್ಟಡಗಳಿವೆ. ಇದ್ಯಾವುದನ್ನೂ ಕೂಡ ಜನಪ್ರತಿನಿಧಿಗಳು ಲೆಕ್ಕಿಸದೇ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಶಿಥಿಲಾವಸ್ಥೆ ತಲುಪಿರುವ ಸರ್ಕಾರಿ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಕುರಿತು ಸರ್ಕಾರದ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಗಮನ ಸೆಳೆದರೂ ಕೂಡ ಪ್ರಯೋಜನವಾಗಿಲ್ಲ. ಕೋವಿಡ್ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್ಡೌನ್ ಹೇರಿಕೆ ಬಳಿಕ ಅನ್ಲಾಕ್ ಜಾರಿಯಾಯಿತು. ಆದ್ರೆ ಶಾಲಾ-ಕಾಲೇಜುಗಳ ಪುನಾರಂಭಕ್ಕೆ ಅನುಮತಿ ಇದ್ದರೂ ಸಹ ತರಗತಿಗಳನ್ನು ನಡೆಸಲು ಅನುಮತಿ ಇಲ್ಲ.
ಆದರೆ ಲಾಕ್ಡೌನ್ ವೇಳೆಯಲ್ಲಾದರೂ ಶಾಲೆಗಳ ದುರಸ್ತಿ ಕಾರ್ಯ ಮಾಡಬಹುದಾಗಿತ್ತು. ಈ ಕಾರ್ಯಕ್ಕೂ ಸರ್ಕಾರ ಮುಂದಾಗಲಿಲ್ಲ. ಶಾಲೆಗಳು ಆರಂಭವಾದ ಬಳಿಕ ದುರಸ್ತಿ ಕಾರ್ಯ ಆರಂಭಿಸುವುದು ಸೂಕ್ತವಲ್ಲ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಬಾಪೂಜಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯಶಿಕ್ಷಕಿ ಆರ್.ಗೀತಾ ಮಾತನಾಡಿ, ನಮ್ಮ ಶಾಲೆಯ 12 ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿವೆ. ಈ ಶಾಲೆಯನ್ನು ನೆಲಸಮಗೊಳಿಸಿ ಬೇರೊಂದು ಕಡೆಗೆ ಸೂಕ್ತ ಜಾಗ ನಿಗದಿಪಡಿಸಿ ಹೊಸದಾಗಿ ಶಾಲೆಯ ಕಟ್ಟಡ ನಿರ್ಮಿಸಿಕೊಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಕೋರಿದ್ದಾರೆ.
ಈ ಸಂಬಂಧ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಡಿಡಿಪಿಐ ಸಿ.ರಾಮಪ್ಪ, ಈಗಾಗಲೇ ಅಂದಾಜು 438 ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಮಂಜೂರಾತಿ ಮಾಡಲಾಗಿದ್ದು, ಕೂಡಲೇ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುವುದು ಎಂದಿದ್ದಾರೆ.