ಹೊಸಪೇಟೆ: ಕನ್ನಡ ರಾಜ್ಯೋತ್ಸವದಂದು ವಿಜಯನಗರ ಜಿಲ್ಲೆ ಘೋಷಣೆಯಾಗುವ ಜನರ ನಿರೀಕ್ಷೆ ಹುಸಿಯಾಗಿದೆ. ಕೆಲ ದಿನಗಳ ಹಿಂದೆ ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನೂತನ ವಿಜಯನಗರ ಜಿಲ್ಲಾ ಘೋಷಣೆ ಕುರಿತ ಪ್ರಸ್ತಾವನೆಯ ಪುಸ್ತಕ ನೀಡಿದ್ದರು.
ವಿಜಯನಗರ ಕ್ಷೇತ್ರದ ಜನರು ಜಿಲ್ಲೆ ಘೋಷಣೆ ಆಗುವುದನ್ನು ಕಾತರದಿಂದ ಎದುರು ನೋಡುತ್ತಿದ್ದರು. ಆದರೆ, ಜಿಲ್ಲೆ ಘೋಷಣೆ ಆಗುವ ಯಾವ ಲಕ್ಷಣಗಳು ಸದ್ಯ ಕಾಣುತ್ತಿಲ್ಲ. ಸಚಿವ ಆನಂದ ಸಿಂಗ್ ಹಲವು ದಿನಗಳಿಂದ ಶೀಘ್ರದಲ್ಲಿ ವಿಜಯನಗರ ಜಿಲ್ಲೆ ಘೋಷಣೆಯಾಗಲಿದೆ ಎಂದು ಪದೇ ಪದೆ ಹೇಳಿಕೊಂಡು ಬರುತ್ತಿದ್ದಾರೆ. ಹೀಗಾಗಿ ನವೆಂಬರ್ 1 ಕ್ಕೆ ನೂತನ ಜಿಲ್ಲೆ ಘೋಷಣೆ ಕುರಿತು ಹೆಚ್ಚಿನ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿತ್ತು. ಆದರೆ, ಸರ್ಕಾರದಿಂದ ನೂತನ ಜಿಲ್ಲೆಯ ರಚನೆ ಕುರಿತು ಒಂದು ಹೇಳಿಕೆ ಸಹ ಹೊರ ಬಿದ್ದಿಲ್ಲ.
ವಿಜಯನಗರ ಜಿಲ್ಲೆಯ ನಕ್ಷೆ ವೈರಲ್: ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವಿಜಯನಗರ ಜಿಲ್ಲೆ ಹಾಗೂ ಬಳ್ಳಾರಿ ಜಿಲ್ಲೆ ನಕ್ಷೆ ವೈರಲ್ ಆಗಿತ್ತು. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ಹರಪನಹಳ್ಳಿ, ಹೂವಿನಹಡಗಲಿಯನ್ನು ನೂತನ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳಿಸಲಾಗಿತ್ತು. ಇನ್ನು ಬಳ್ಳಾರಿ ಜಿಲ್ಲೆಗೆ ಸಿರುಗುಪ್ಪ, ಕಂಪ್ಲಿ, ಕುರುಗೋಡು, ಬಳ್ಳಾರಿ, ಸಂಡೂರ ಅನ್ನು ಸೇರಿಸಲಾಗಿತ್ತು. ಈ ನಕ್ಷೆ ನೂತನ ವಿಜಯನಗರ ಜಿಲ್ಲಾ ಘೋಷಣೆ ಕುರಿತ ಪ್ರಸ್ತಾವನೆಯಲ್ಲಿದೆ. ಅಲ್ಲದೆ, ಹೊಸಪೇಟೆ ಹೃದಯ ಭಾಗದಲ್ಲಿ ರೋಟರಿ ಡಿಜಿಟಲ್ ಗಡಿಯಾರವನ್ನು ಅಳವಡಿಸಲಾಗಿದ್ದು, ಅದರಲ್ಲಿ ವಿಜಯನಗರಕ್ಕೆ ಸ್ವಾಗತ ಎಂಬ ಬರಹ ಬರುತ್ತಿದೆ.