ಬಳ್ಳಾರಿ :ಕೋವಿಡ್ ಸೋಂಕಿತರ ಸೇವೆಗೆ ಮುಂದಾಗುವ ಇಂಗಿತ ವ್ಯಕ್ತಪಡಿಸಿದ್ದ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ (ಓಟಿ)ಗಳ ನೇಮಕಾತಿ ಪ್ರಕ್ರಿಯೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಮುಂದಾಗಿದೆ.
ಇದಕ್ಕೂ ಮೊದಲು ಕಳೆದ ಮಾರ್ಚ್ ತಿಂಗಳಿಂದಲೂ ಕೂಡ ರಾಜ್ಯ ಸರ್ಕಾರದ ಮುಂದೆ ಇಂತಹದೊಂದು ಬೇಡಿಕೆಯನ್ನಿಟ್ಟು ಕೋವಿಡ್ ಸೇವೆಗೆ ಸ್ವಯಂ ಪ್ರೇರಿತವಾಗಿ ಮುಂದಾಗಿದ್ದರು. ಆದರೆ, ಕೋವಿಡ್ ಸೇವೆಗೆ ಸ್ವತಃ ನಾವೇ ಬರುತ್ತೇವೆ ಎಂದು ಕೇಳಿಕೊಂಡ್ರೂ ರಾಜ್ಯ ಸರ್ಕಾರ ಮಾತ್ರ ಒಪ್ಪುತ್ತಿಲ್ಲ ಎಂದು ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ಗಳು ಬೇಸರ ವ್ಯಕ್ತಪಡಿಸಿದ್ದರು.
ಈಟಿವಿ ವರದಿ ಇಂಪ್ಯಾಕ್ಟ್.. ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ ನೇಮಕಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಈ ಕುರಿತಂತೆ ಈಟಿವಿ ಭಾರತ ‘ಕೋವಿಡ್ ಸೇವೆಗೆ ಮುಂದಾದ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್.. ಒಪ್ಪುತ್ತಿಲ್ಲ ರಾಜ್ಯ ಸರ್ಕಾರ..’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಇದನ್ನೂ ಓದಿ:ಕೋವಿಡ್ ಸೇವೆಗೆ ಮುಂದಾದ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್.. ಒಪ್ಪುತ್ತಿಲ್ಲ ರಾಜ್ಯ ಸರ್ಕಾರ..
ಈ ವರದಿಯಿಂದ ಎಚ್ಚೆತ್ತ ರಾಜ್ಯ ಸರ್ಕಾರ ಆಪರೇಷನ್ ಥಿಯೇಟರ್/ಅನಸ್ತೇಸಿಯಾ ಟೆಕ್ನಿಷಿಯನ್ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಇದರ ಭಾಗವಾಗಿ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ನಿರ್ಮಿಸಲಾಗಿದ್ದ ಅತ್ಯಾಧುನಿಕ ಟ್ರಾಮಾ ಕೇರ್ ಸೆಂಟರ್ನಲ್ಲಿ ಮೊದಲ ಬಾರಿಗೆ ಈ ಕೋವಿಡ್ ಸೋಂಕಿತರನ್ನು ಇಡುವ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಆಪರೇಷನ್ ಥಿಯೇಟರ್ (ಓಟಿ) ಟೆಕ್ನಾಲಜಿಸ್ಟ್ ನೇಮಿಸಲು ಬಳ್ಳಾರಿಯ ವಿಮ್ಸ್ ನಿರ್ಧರಿಸಿದೆ.
18 ಮಂದಿ ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ ಸೇರಿ ಇನ್ನಿತರೆ ಸುಮಾರು 55 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಡಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ನೂರಾರು ಮಂದಿ ನಿರುದ್ಯೋಗಿಗಳು ನೇರವಾಗಿ ಸಂದರ್ಶನಕ್ಕೆ ಹಾಜರಾಗಿದ್ದರು. ಬಳ್ಳಾರಿಯ ವಿಮ್ಸ್ ನಿರ್ದೇಶಕ ಡಾ.ದೇವಾನಂದ ನೇತೃತ್ವದಲ್ಲಿ ಈ ನೇಮಕಾತಿಯ ನೇರ ಸಂದರ್ಶನ ಪ್ರಕ್ರಿಯೆ ನಡೆಯಿತು. ನೂರಾರು ನಿರುದ್ಯೋಗಿಗಳು ತಮಗೆ ಈ ಕೆಲಸ ದೊರಕಲಿದೆಯಾ ಎಂಬ ಆಶಾಭಾವನೆಯಲ್ಲಿದ್ದಾರೆ. ಆಪರೇಷನ್ ಥಿಯೇಟರ್ ಟೆಕ್ನಾಲಜಿಸ್ಟ್ಗಳ ಮೊಗದಲ್ಲೂ ಸಂತಸ ಮೂಡಿದೆ.