ಬಳ್ಳಾರಿ:ಪಕ್ಕದ ಕೊಪ್ಪಳ ಜಿಲ್ಲೆಯ ಗೊಲ್ಲ (ಯಾದವ) ಸಮುದಾಯದ 100ಕ್ಕೂ ಅಧಿಕ ಕುಟುಂಬಗಳು ಸುಮಾರು 5ರಿಂದ 6 ಸಾವಿರಕ್ಕೂ ಅಧಿಕ ಗೋವುಗಳನ್ನ ಸಾಕಾಣಿಕೆ ಮಾಡಿದ್ದಾರೆ. ಗೋವುಗಳ ಸಾಕಾಣಿಕೆಯೇ ಅವರ ಪ್ರಮುಖ ವೃತ್ತಿಯಾಗಿದೆ. ಈ ಜಾನುವಾರುಗಳ ಸಾಕಾಣಿಕೆ ವೇಳೆ ಮೇವಿನ ಕೊರತೆಯನ್ನ ಅನುಭವಿಸುತ್ತಿರೋದು ಹೇಳತೀರದಾಗಿದೆ.
ಈ ಬಾರಿ ಮಳೆ- ಬೆಳೆ ಚೆನ್ನಾಗಿದ್ದರೂ ಕೂಡ ಬೆಳೆನಷ್ಟದಂತಹ ಸಂಕಷ್ಟಕ್ಕೆ ಸಿಲುಕಿಕೊಂಡು ಮೇವಿನ ಸಂಗ್ರಹಣೆಗೇನೆ ರೈತಾಪಿವರ್ಗ ಆದ್ಯತೆ ನೀಡದಿರುವ ಹಿನ್ನೆಲೆ ಜಾನುವಾರು ಸಾಕಾಣಿಕೆದಾರರಿಗೆ ಭಾರಿ ಸಂಕಷ್ಟ ಎದುರಾಗಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನ ಜಾರಿಗೆ ತರೋದರ ಜೊತೆಗೆ ಜಾನುವಾರು ಸಾಕಾಣಿಕೆದಾರರಿಗೆ ಅಗತ್ಯ ಮೇವು ಪೂರೈಸಿ ಜಾನುವಾರುಗಳ ಅಲೆಮಾರಿ ಅಲೆದಾಟವನ್ನ ತಪ್ಪಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಕೊಪ್ಪಳದಿಂದ ಗಣಿನಾಡಿಗೆ ಗುಳೆ ಬಂದ ಗೊಲ್ಲ ಸಮುದಾಯ ಕೊಪ್ಪಳ ಜಿಲ್ಲೆಯ ಗೊಲ್ಲ (ಯಾದವ) ಸಮುದಾಯದ ಒಂದೊಂದು ಕುಟುಂಬಕ್ಕೆ ತಲಾ 300-400 ಜಾನುವಾರುಗಳಿವೆ. ಅಂದಾಜು 5-6 ಸಾವಿರ ಜಾನುವಾರುಗಳನ್ನ ಬಳ್ಳಾರಿ ಜಿಲ್ಲೆಗೆ ಕರೆ ತರಲಾಗಿದೆ. ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷ್ಣಾನಗರ ಕ್ಯಾಂಪ್, ಎರಂಗಳಿ, ಬಾದನ ಹಟ್ಟಿ ಸೇರಿದಂತೆ ಇನ್ನಿತರೆ ಗ್ರಾಮಗಳ ರೈತರ ಹೊಲಗಳಲ್ಲಿ ಈ ಜಾನುವಾರುಗಳ ಹಿಂಡನ್ನ ಕೂಡಿ ಹಾಕಲಾಗಿದೆ. ಈ ಜಾನುವಾರುಗಳ ಹಿಂಡಿನೊಂದಿಗೆ ಗೊಲ್ಲ ಸಮುದಾಯದ ಕುಟುಂಬಗಳೂ ಸಹ ತಾತ್ಕಾಲಿಕ ಟೆಂಟ್ಗಳನ್ನ ನಿರ್ಮಿಸಿಕೊಂಡು ಕೊರೆಯುವ ಚಳಿಯಲ್ಲೇ ನೆಲೆಸಿವೆ.
ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ಭತ್ತ ನಾಟಿ ಮಾಡಿರೋದರಿಂದಲೇ ನಮಗೆ ಮೇವಿನ ಕೊರತೆ ಉಂಟಾಗಿದೆ. ಹೀಗಾಗಿ ಬಳ್ಳಾರಿ ಜಿಲ್ಲೆಯತ್ತ ಗುಳೆ ಬಂದೀವಿ. ಇಲ್ಲಿಯ ರೈತರು ಕೊಡುವ ಅಲ್ಪಸ್ವಲ್ಪ ಹಣದಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಹಗಲು-ರಾತ್ರಿ ಚಳಿಯಲ್ಲಿಯೇ ತಾತ್ಕಾಲಿಕ ಟೆಂಟ್ ನಿರ್ಮಿಸಿಕೊಂಡೇ ಜೀವನ ನಡೆಸುತ್ತಿದ್ದೇವೆ. ನಮ್ಮ ಗೋಳ್ ಕೇಳೋರು ಯಾರೂ ಇಲ್ದಂಗ ಆಗೈತ್ರೀ ಅಂತಾರೆ ಜಾನುವಾರುಗಳ ಮಾಲೀಕ ಶರಣಪ್ಪ.
ಕೊಪ್ಪಳದಿಂದ ಗಣಿನಾಡಿಗೆ ಗುಳೆ ಬಂದ ಗೊಲ್ಲ ಸಮುದಾಯ ಓದಿ:ಶಸ್ತ್ರ ಚಿಕಿತ್ಸೆ ಬಳಿಕ ಸಿಗದ ಬೆಡ್: ಶಹಾಪುರದ ಆಸ್ಪತ್ರೆ ಮೆಟ್ಟಿಲು, ಆವರಣದಲ್ಲೇ ನರಳಾಡಿದ ಮಹಿಳೆಯರು!
ಗೊಲ್ಲ ಸಮುದಾಯದ ಜಾನುವಾರು ಸಾಕಾಣಿಕೆ ಕುಟುಂಬಗಳು ಹೊಂದಿರುವ ಸಾವಿರಾರು ಜಾನು ವಾರುಗಳಿಗೆ ಮೇವಿನ ಕೊರತೆ ಉಂಟಾಗಿರೋದ್ರಿಂದಲೇ ಊರೂರು ಅಲೆದಾಟ ನಡೆಸಿದ್ದಾರೆ. ಕುಟುಂಬ ಸಮೇತ ಅಲೆಮಾರಿಗಳಾಗಿ ಊರೂರು ಅಲೆದಾಡುತ್ತಿದ್ದಾರೆ. ಚಿಕ್ಕ ಮಕ್ಕಳನ್ನ ಕಟ್ಟಿಕೊಂಡು ಟೆಂಟ್ಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಒಂದು ಕಡೆ ಬಡತನ ಮತ್ತೊಂದೆಡೆ ಗೋವುಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಇವರಿಗೆ ಗೋವುಗಳೇ ಜೀವನಾಧಾರ. ಆದ್ರೆ ಈ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಹೀಗಾಗಿ ಜಾನುವಾರುಗಳೊಂದಿಗೆ ಊರೂರು ಅಲೆದಾಡುತ್ತಿದ್ದಾರೆ. ಇದರಿಂದಾಗಿ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಈ ಕುಟುಂಬಗಳ ನೆರವಿಗೆ ಬರಬೇಕೆಂದು ಜಿಲ್ಲಾ ಗೊಲ್ಲರ ಸಂಘದ ಕಾರ್ಯದರ್ಶಿ ಕೆ.ಇ. ಚಿದಾನಂದಪ್ಪ ಆಗ್ರಹಿಸಿದ್ದಾರೆ.