ಬಳ್ಳಾರಿ:ದೇವರ ದರ್ಶನಕ್ಕೆ ತೆರಳಿ ವಾಪಸ್ ಮನೆಗೆ ಬಂದವರಿಗೆ ಆಘಾತ ಕಾದಿತ್ತು. ಮಗಳ ಮದುವೆಗಾಗಿ ಖರೀದಿಸಿಟ್ಟಿದ್ದ ಬಂಗಾರ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಖದೀಮರು ದೋಚಿ ಪರಾರಿಯಾಗಿರುವ ಘಟನೆ ನಗರದ ಶ್ರೀರಾಂಪುರ ಕಾಲೋನಿಯಲ್ಲಿ ನಡೆದಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಪೌರ ಕಾರ್ಮಿಕ ನಾರಾಯಣಪ್ಪ ಎಂಬುವರ ಮನೆಯಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಮನೆಯಲ್ಲಿದ್ದ 20 ತೊಲೆ ಬಂಗಾರದ ಆಭರಣ, 400 ಗ್ರಾಂ ಬೆಳ್ಳಿ ಹಾಗೂ 70 ಸಾವಿರ ರೂ. ನಗದು ಕಳ್ಳತನವಾಗಿದೆ. ಮನೆಯವರೆಲ್ಲ ದೇವರ ದರ್ಶನಕ್ಕೆ ತೆರಳಿದ್ದ ವೇಳೆ ಕನ್ನ ಹಾಕಲಾಗಿದ್ದು, ಮರಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ದೇವರ ದರ್ಶನಕ್ಕೆ ತೆರಳಿದ್ದಾಗ ಮನೆಗೆ ಕನ್ನ ಆಭರಣ, ಹಣ ಕಳೆದುಕೊಂಡ ಕುಟುಂಬ ಮನೆಯಂಗಳದಲ್ಲಿ ಕುಳಿತು ಕಣ್ಣೀರಿಡುವಂತಾಗಿದೆ. ಪಾಲಿಕೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ನಾರಾಯಣಪ್ಪ ಅವರು, ತಮ್ಮ 2ನೇ ಮಗಳ ಮದುವೆಗಾಗಿ ಬಂಗಾರ ಮತ್ತು ಬೆಳ್ಳಿಯ ಆಭರಣ ಖರೀದಿಸಿಟ್ಟಿದ್ದರು. ಮದುವೆಗೂ ಮುನ್ನ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಹುಲಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಕುಟುಂಬ ಸಮೇತ ತೆರಳಿದ್ದರು. ಬ್ರೂಸ್ಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ:ಹರಿಯಾಣ ಡಿಎಸ್ಪಿ ಮಾದರಿ ಜಾರ್ಖಂಡ್ ಮಹಿಳಾ ಪಿಎಸ್ಐ ಹತ್ಯೆ?: ಆರೋಪಿ ಅರೆಸ್ಟ್