ಹೊಸಪೇಟೆ:ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜಾಗೃತಿ ಅಭಿಯಾನದ ವೇಳೆ ಬಿಜೆಪಿ ಕಾರ್ಯಕರ್ತರು ಮತ್ತು ದಲಿತ,ಮುಸ್ಲಿಂ ಸಮುದಾಯದವರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಬಿಜೆಪಿ ಕಾರ್ಯಕರ್ತರ ವಿರುದ್ಧ ದಲಿತರು ಮತ್ತು ಮುಸ್ಲಿಮರು ಗೋ ಬ್ಯಾಕ್ ಘೋಷಣೆಗಳನ್ನು ಕೂಗಿದರು.
ನಗರದ ಅಂಬೇಡ್ಕರ್ ಕಾಲೋನಿಯಲ್ಲಿ ಬಿಜೆಪಿಯ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಕಾಲೋನಿಯ ಯುವಕರು ಮತ್ತು ಮುಖಂಡರು, ಬಿಜೆಪಿಯ ಕಾರ್ಯಕರ್ತರನ್ನು ಕಾಲೋನಿಯ ಒಳಗೆ ಹೋಗುವುದಕ್ಕೆ ಅವಕಾಶ ಮಾಡಿಕೊಡಲಿ ಎಂದು ಪಟ್ಟು ಹಿಡಿದರು.
ಈ ವೇಳೆ ಮಾತನಾಡಿದ ಪ್ರಗತಿ ಪರ ಚಿಂತಕ ಸಂತೋಷ್, ಇದು ಸಂವಿಧಾನ ವಿರೋಧಿ ನೀತಿ. ದೇಶದಲ್ಲಿ ನೆಮ್ಮದಿಯನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮ ಜನರಿಗೆ ತಿಳುವಳಿಕೆಯನ್ನು ನಾವು ನೀಡುತ್ತೇವೆ. ದೇಶದ ಸಂವಿಧಾನದ ಬಗ್ಗೆ ಹೇಳಿ ಕೊಡುತ್ತೇವೆ ಎಂದು ಹೇಳಿದರು.
ಹೊಸಪೇಟೆಯಲ್ಲಿ ಬಿಜೆಪಿ ವಿರುದ್ಧ ಗೋಬ್ಯಾಕ್ ಘೋಷಣೆ.. ನಾವೆಲ್ಲ ಭಾರತೀಯರು, ದೇಶದ ಬಗ್ಗೆ ಅಭಿಮಾನ, ಪ್ರೀತಿ, ಗೌರವ ನಂಬಿಕೆ ನಮ್ಮಲ್ಲಿದೆ. ಇವರು ನಮಗೆ ಯಾವ ಜಾಗೃತಿಯನ್ನು ಮೂಡಿಸುವುದು ಬೇಡ. ಬಿಜೆಪಿ ಪಕ್ಷದವರನ್ನು ನಮ್ಮ ಕಾಲೋನಿಯಲ್ಲಿ ಬರಲು ಬಿಡುವುದಿಲ್ಲ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಸಹ ಅದೇ ಕಾಲೋನಿಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಪಟ್ಟು ಹಿಡಿದರು. ಕೆಲ ಸಮಯ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಬಂದು ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಅಲ್ಲಿಂದ ಕಳಿಸಿದರು.