ಕರ್ನಾಟಕ

karnataka

ETV Bharat / state

ಜೂ. 21 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ: ಬಳ್ಳಾರಿ ಜಿಲ್ಲಾಧಿಕಾರಿ - ಕೊರೊನಾ ಲಸಿಕೆ

ಜೂ.21ರಿಂದ 18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆ ನೀಡಿ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದ್ದಾರೆ.

dc
dc

By

Published : Jun 19, 2021, 9:16 PM IST

ಬಳ್ಳಾರಿ :18 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೆ ಜಿಲ್ಲೆಯಲ್ಲಿ ಜೂ.21ರಿಂದ ಕೋವಿಡ್ ಲಸಿಕೆ ನೀಡಲು ಉದ್ದೇಶಿಸಲಾಗಿದ್ದು, ಇದಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿಸಿ ಪವನಕುಮಾರ್ ಮಾಲಪಾಟಿ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದದಲ್ಲಿ ಅವರು ಮಾತನಾಡಿದರು.

ಮೂರನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ. ತಾಲೂಕಿನ ಎಲ್ಲಾ ಅಧಿಕಾರಿಗಳು ಪಟ್ಟಣ ಹಾಗೂ ಆಯ್ದ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿಕೊಳ್ಳಿ. ಜೂ.21ರಂದು ಮೊದಲ ದಿನ ಆಯ್ದ ಪ್ರದೇಶದ ಜನರಿಗೆ ಲಸಿಕೆ ನೀಡಿ, ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾ.ಪಂ. ವ್ಯಾಪ್ತಿಗೆ ಲಸಿಕಾ ಪ್ರಕ್ರಿಯೆಯನ್ನು ವಿಸ್ತರಿಸಿ ಎಂದರು.

ಜೂ.21ರಂದು ಒಂದೇ ದಿನ ಜಿಲ್ಲೆಯಾದ್ಯಂತ 40 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಇದ್ದು, ಎಲ್ಲರೂ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಸಿಕೆ ನೀಡಿ. ಯಾರೂ ಕೂಡ ಲಸಿಕೆಯಿಂದ ವಂಚಿತರಾಗಬಾರದು. ನಗರಸಭೆ ಮತ್ತು ಗ್ರಾ.ಪಂ. ಮಟ್ಟದ ಅಧಿಕಾರಿಗಳು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಲಸಿಕೆ ಕಾರ್ಯಕ್ರಮವನ್ನು ನಡೆಸಿ. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ ಎನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದು ಅವರು ಸಭೆಯಲ್ಲಿ ತಿಳಿಸಿದರು.

ನಗರ ವ್ಯಾಪ್ತಿಯಲ್ಲಿ ಪಾಲಿಕೆ ಮತ್ತು ನಗರಸಭೆ ಸ್ವಚ್ಛತಾ ವಾಹನದಲ್ಲಿ ಮೈಕ್ ಮೂಲಕ, ಗ್ರಾಪಂ ಮಟ್ಟದಲ್ಲಿ ಡಂಗೂರ ಸಾರಿಸುವುದರ ಮೂಲಕ ಲಸಿಕೆಯ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ. ಮೊದಲ ಡೋಸ್ ಪಡೆದು ಎರಡನೇ ಡೋಸ್‍ಗಾಗಿ ಕಾಯುತ್ತಿದ್ದವರನ್ನು ಗುರುತಿಸಿ ಅವರಿಗೆ ಲಸಿಕೆ ನೀಡಿ. ಲಸಿಕೆ ಪಡೆದುಕೊಂಡವರ ಮರಣದ ಪ್ರಮಾಣವು ಕೂಡ ತುಂಬಾ ಕಡಿಮೆ ಇದ್ದು, ಕೋವಿಡ್ ಮಹಾಮಾರಿಯನ್ನು ಎದುರಿಸಲು ವ್ಯಾಕ್ಸಿನ್ ಒಂದೇ ದಾರಿ. ಹೀಗಾಗಿ ಪ್ರತಿಯೊಬ್ಬರಿಗೆ ವ್ಯಾಕ್ಸಿನ್ ನೀಡಿ ಎಂದು ಅವರು ತಿಳಿಸಿದರು.

ಬಾಲಚೈತನ್ಯ ಕೇಂದ್ರಗಳಲ್ಲಿರುವ ಮಕ್ಕಳ ತಾಯಂದಿರು ಮತ್ತು ಪೋಷಕರಿಗೆ ಲಸಿಕೆ ನೀಡಿದ ನಂತರ ಅವರನ್ನು ಅಲ್ಲಿಂದ ಕಳುಹಿಸಿ ಎಂದು ಅವರು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಮಾತನಾಡಿ, ಸೂಕ್ತ ರೀತಿಯ ಭದ್ರತೆಯನ್ನು ಮಾಡಿಕೊಳ್ಳಿ, ಆದಷ್ಟು ಮೈದಾನ ಹೊಂದಿದ ಕಡೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆಯಿರಿ. ಆಗ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲಸಿಕೆ ನೀಡಲು ಸಾಧ್ಯವಾಗುತ್ತದೆ. ಲಸಿಕೆ ಕೇಂದ್ರಗಳಲ್ಲಿ ಯಾವುದೇ ರೀತಿಯ ಗಲಭೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ಕಾರ್ಯನಿರ್ವಹಿಸಿ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನ್‍ಕುಮಾರಿ ಅವರು ಮಾತನಾಡಿ ಜೂ.21ರಂದು ಬಳ್ಳಾರಿ ನಗರ ಪ್ರದೇಶದಲ್ಲಿ ಮತ್ತು ಜೂ.22ರಂದು ಬಳ್ಳಾರಿ ಗ್ರಾಮಾಂತರ ಪ್ರದೇಶದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಈ ಸಮಯದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ್, ಸಹಾಯಕ ಆಯುಕ್ತರಾದ ರಮೇಶ್ ಕೋನರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಹೆಚ್.ಎಲ್.ಜನಾರ್ಧನ್, ವಿಮ್ಸ್ ನಿರ್ದೇಶಕರಾದ ಡಾ.ಗಂಗಾಧರ ಗೌಡ, ಜಿಲ್ಲಾ ಆರ್​ಸಿಎಚ್ ಅಧಿಕಾರಿ ಡಾ.ಅನಿಲ್‍ಕುಮಾರ್ ಮತ್ತು ಆರೋಗ್ಯ ಇಲಾಖೆಯ ಇತರೆ ಸಿಬ್ಬಂದಿ ಇದ್ದರು.

ABOUT THE AUTHOR

...view details